ಅಸಂಖ್ಯ ಪ್ರಮಥರ ಹಾಗೂ ಸರ್ವ ಶರಣರ ಗಣ ಮೇಳಕ್ಕೆ ದೂರದ ಊರುಗಳಿಂದ ಬಂದಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರಿಗೆ ಬೆಳಗ್ಗೆ ಉಪಹಾರ ಸೇರಿದಂತೆ ದಿನವಿಡೀ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಊಟಕ್ಕೆ ಫಲಾವ್ ,ಮೊಸರ ಬಜ್ಜಿ, ಲಾಡು, ಮೈಸೂರು ಪಾಕ್, ತರಕಾರಿ ಫಲ್ಯ ವಿವಿಧ ಬಗೆಯ ಅಡುಗೆಯನ್ನು ತಯಾರಿ ಮಾಡಲಾಗಿದೆ. ಅಂದಾಜು ಎರಡು ಲಕ್ಷ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಊಟ ಪಡೆಯುವ ವೇಳೆ ನೂಕು ನುಗ್ಗಲು ಉಂಟಾಗದಿರಲು ಒಟ್ಟು ನಲವತ್ತೇಳು ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಭಕ್ತರು ಪ್ರಸಾದ ಸ್ವೀಕರಿಸಲು ಕೋರಲಾಗಿದೆ. ಅಡುಗೆ ತಯಾರಿಗಾಗಿ 150 ಕ್ವಿಂಟಾಲ್ ಅಕ್ಕಿ, 60 ಕ್ವಿಂಟಾಲ್ ರವೆ, ಹತ್ತು ಸಾವಿರ ಲೀ. ಹಾಲು, ಹತ್ತು ಸಾವಿರ ಲೀ. ಮೊಸರು, ಐದು ಲಕ್ಷ ಲೀ. ನೀರಿನ ಪ್ಯಾಕ್, ಆರು ಲೋಡ್ ತರಕಾರಿ ತರಿಸಲಾಗಿದ್ದು, ಚಿತ್ರದುರ್ಗದಿಂದ ಸುಮಾರು ಮೂರು ನೂರಕ್ಕು ಹೆಚ್ಚು ಬಾಣಸಿಗರು ಪ್ರಸಾದ ತಯಾರಿಯಲ್ಲಿ ತೊಡಗಿಸಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 7 ವರೆಗೆ ದಾಸೋಹ ನಡೆಯಲಿದೆ ಎಂದು ಗಣಮೇಳ ಕಾರ್ಯದರ್ಶಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.









