ಟೀಮ್ ಇಂಡಿಯಾಗೆ ಸೋಲು.. ಕೊನೆಗೂ ಗೆಲುವಿನ ನಗೆ ಬೀರಿದ ಲಂಕಾ.. ಪ್ರಜ್ವಲಿಸಿದ ಸ್ಕೈ..!
ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ಮೂರು ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ. ಈ ಮೂಲಕ ಶ್ರೀಲಂಕಾ ತಂಡ ತವರಿನಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಟೀಮ್ ಇಂಡಿಯಾ ಪ್ರಯತ್ನ ಕೈಗೂಡಲಿಲ್ಲ. ಆದ್ರೂ ಸರಣಿಯನ್ನು ಶಿಖರ್ ಧವನ್ 2-1 ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 226 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಶ್ರೀಲಂಕಾ 39 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 227 ರನ್ ದಾಖಲಿಸಿ ಗೆಲುವಿನ ನಗೆ ಬೀರಿತ್ತು.
ಶ್ರೀಲಂಕಾ ಪರ ಆವಿಷ್ಕಾ ಫರ್ನಾಂಡೊ ಆಕರ್ಷಕ 76 ರನ್ ಹಾಗೂ ಭಾನುಕಾ ರಾಜಪಕ್ಷ ಅಮೋಘ 65 ರನ್ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನುಳಿದಂತೆ ಚರಿತ್ ಅಸಲಾಂಕಾ 24 ಮತ್ತು ರಮೇಶ್ ಮೆಂಡೀಸ್ ಅಜೇಯ 15 ರನ್ ಗಳಿಸಿ ಗಮನ ಸೆಳೆದ್ರು.
ಟೀಮ್ ಇಂಡಿಯಾ ಪರ ರಾಹುಲ್ ಚಾಹರ್ ಮೂರು ವಿಕೆಟ್ ಪಡೆದ್ರೆ, ಚೇತನ್ ಸಕಾರಿಯಾ ಎರಡು ಹಾಗೂ ಕೆ. ಗೌತಮ್, ಹಾರ್ದಿಕ್ ಪಾಂಡ್ಯ, ನವದೀಪ್ ಸೈನಿ ತಲಾ ಒಂದು ವಿಕೆಟ್ ಉರುಳಿಸಿದ್ರು.
ಇದಕ್ಕು ಮೊದಲು ಟಾಸ್ ಗೆದ್ದಿದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು 47 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.
ಈ ನಡುವೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಐದು ಮಂದಿ ಆಟಗಾರರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಕೆ. ಗೌತಮ್, ರಾಹುಲ್ ಚಾಹರ್, ಸಂಜು ಸಾಮ್ಸನ್, ಚೇತನ್ ಸಕಾರಿಯಾ ಮತ್ತು ನಿತೇಶ್ ರಾಣಾ ಅವರು ಏಕದಿನ ಕ್ಯಾಫ್ ಧರಿಸುವ ಅವಕಾಶವೂ ಸಿಕ್ಕಿತ್ತು. ಈ ಹಿಂದೆ 1980ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಐವರು ಆಟಗಾರರು ಪದಾರ್ಪಣೆ ಮಾಡಿದ್ದರು. ಆಗ ರೋಜರ್ ಬಿನ್ನಿ, ಸಂದೀಪ್ ಪಾಟೀಲ್, ಕೀರ್ತಿ ಅಜಾದ್, ಟಿ. ಶ್ರೀನಿವಾಸನ್, ದಿಲೀಪ್ ದೋಶಿ ಅವರು ಮೆಲ್ಬರ್ನ್ ಅಂಗಣದಲ್ಲಿ ಏಕದಿನ ಕ್ರಿಕೆಟ್ ಗೆ ಪ್ರವೇಶ ಪಡೆದುಕೊಂಡಿದ್ದರು.
ಆದ್ರೆ ಟೀಮ್ ಇಂಡಿಯಾದ ಈ ಪ್ರಯೋಗ ಸೋಲಿನೊಂದಿಗೆ ಅಂತ್ಯಗೊಂಡಿದೆ. ಟೀಮ್ ಇಂಡಿಯಾ 43.1 ಓವರ್ ಗಳಲ್ಲಿ 225 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಪೃಥ್ವಿ ಶಾ 49ರನ್ ಹಾಗೂ ಸಂಜು ಸಾಮ್ಸನ್ 46 ಮತ್ತು ಸೂರ್ಯಕುಮಾರ್ ಯಾದವ್ 40 ರನ್ ಸಿಡಿಸಿದ್ರು.
ಇನ್ನುಳಿದಂತೆ ಧವನ್ 13 ರನ್ ಗೆ ಹೋರಾಟ ಮುಗಿಸಿದ್ರು. ಮನೀಷ್, ಹಾರ್ದಿಕ್ ಪಾಂಡ್ಯ ಮತ್ತೆ ವೈಫಲ್ಯ ಅನುಭವಿಸಿದ್ರೆ, ನಿತೇಶ್ ರಾಣ ಏಳು ರನ್ ಹಾಗೂ ಗೌತಮ್ 2 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಲಂಕಾ ಪರ ಪ್ರವೀಣ್ ಜಯವಿಕಿರಣ ಮತ್ತು ಅಖಿಲ ಧನಂಜಯ ತಲಾ ಮೂರು ವಿಕೆಟ್ ಪಡೆದ್ರೆ, ದುಶ್ಮಂತ ಚಾಮೀರಾ ಎರಡು ವಿಕೆಟ್ ಕಬಳಿಸಿದ್ರು.
ಸರಣಿಯಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ಸೂರ್ಯಕುಮಾರ್ ಯಾದವ್ ಚೊಚ್ಚಲ ಏಕದಿನ ಸರಣಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಹಿರಿಮೆಗೆ ಪಾತ್ರರಾದ್ರು. ಅವಿಷ್ಕಾ ಫರ್ನಾಂಡೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








