1985ರಲ್ಲೇ ಭಾರತದಲ್ಲಿ ಪಕ್ಕಾ ಟಿ-ಟ್ವೆಂಟಿ ಬ್ಯಾಟ್ಸ್ ಮೆನ್ ಗಳು ಇದ್ರಂತೆ…!
ಅದ್ಯಾಕೋ ಗೊತ್ತಿಲ್ಲ. ಈ ಲಾಕ್ ಡೌನ್ ಟೈಮ್ ನಲ್ಲಿ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ತಮ್ಮ ಹಳೆಯ ಗತಕಾಲದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 1983ರ ವಿಶ್ವಕಪ್ ಟೂರ್ನಿ ಗೆದ್ದ ತಂಡದಲ್ಲಿದ್ದ ಶ್ರೀಕಾಂತ್ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕವೇ ಮಿಂಚು ಹರಿಸಿದ್ದರು.
1981ರಲ್ಲಿ ನಾನು ಭಾರತ ತಂಡವನ್ನು ಮೊದಲ ಬಾರಿ ಪ್ರತಿನಿಧಿಸಿದ್ದೆ. 80ರ ದಶಕದಲ್ಲಿ ನನ್ನ ಆಟದಂತೆ ಯಾರು ಕೂಡ ಆಡುತ್ತಿರಲಿಲ್ಲ. ನನ್ನ ಆಟವನ್ನು ನೋಡಿದ ನಂತರ ಯಾರು ಈತ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಯಾಕಂದ್ರೆ ಆಕ್ರಮಣಕಾರಿ ಪ್ರವೃತ್ತಿಯಿಂದ ಆಡುತ್ತಿದ್ದೆ. ಚೆಂಡನ್ನು ಗಾಳಿಯಲ್ಲಿ ತೇಲಾಡುವಂತೆ ಬ್ಯಾಟ್ ಬೀಸುತ್ತಿದೆ. ಆದ್ರೆ ನನ್ನ ಜೊತೆಗಾರನಾಗಿದ್ದ ಪರ್ಫೆಕ್ಟ್ ಬ್ಯಾಟ್ಸ್ ಮೆನ್ ಸುನೀಲ್ ಗವಾಸ್ಕರ್ ಅವರು ತಾಳ್ಮೆಯ ಜೊತೆ ಆಕ್ರಮಣಕಾರಿಯನ್ನು ಮೈಗೂಡಿಸಿಕೊಂಡಿದ್ದರು. ನಾನು ಕ್ರಿಕೆಟ್ ತಾಂತ್ರಿಕತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಅಂತಾರೆ ಶ್ರೀಕಾಂತ್.
ಶ್ರೀಕಾಂತ್ ಅಬ್ಬರದ ಆರಂಭಿಕ ಆಟಗಾರನಾಗಿದ್ದರು. 1981ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದರ್ಪಾಣೆ ಮಾಡಿದ್ದರು. ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಸುನೀಲ್ ಗವಾಸ್ಕರ್ ಜೊತೆ ಇನಿಂಗ್ಸ್ ಕೂಡ ಆರಂಭಿಸಿದ್ದರು. ಇದೀಗ ಶ್ರೀಕಾಂತ್ ಅವರು ಲಿಟಲ್ ಮಾಸ್ಟರ್ ಜೊತೆಗಿನ ಬ್ಯಾಟಿಂಗ್ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಸುನೀಲ್ ಗವಾಸ್ಕರ್ ಬ್ಯಾಟಿಂಗ್ ಶೈಲಿ ಅಂದ್ರೆ ಅದು ಪರ್ಫೆಕ್ಟ್. ತಾಂತ್ರಿಕವಾಗಿ ಪರಿಪಕ್ವತೆಯನ್ನು ಹೊಂದಿದ್ದರು. ಸಾಂಪ್ರದಾಯಿಕ ಶೈಲಿಯ ಕ್ರಿಕೆಟ್ಗೆ ಒಗ್ಗಿಕೊಂಡಿದ್ದ ಗವಾಸ್ಕರ್ ಪರಿಪೂರ್ಣ ಕ್ರಿಕೆಟಿಗರರಾಗಿದ್ದರು. ಆದ್ರೆ ನಾನು ಅವರಿಗೆ ವಿರುದ್ಧವಾಗಿದ್ದೆ. ನಾನು ತಾಂತ್ರಿಕತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಚೆಂಡನ್ನು ಹೊಡಿಬೇಕು. ಹೊಡಿಯುತ್ತಿದ್ದೆ. ನಮ್ಮಿಬ್ಬರ ಜೊತೆಯಾಟ ಒಂದು ರೀತಿ ಭಿನ್ನವಾಗಿರುತ್ತಿತ್ತು. ಅವರು ಉತ್ತರ ದಿಕ್ಕು ಆಗಿದ್ರೆ, ನಾನು ದಕ್ಷಿಣ ದಿಕ್ಕು ಆಗಿದ್ದೆ ಅಂತ ಶ್ರೀಕಾಂತ್ ಹೇಳ್ತಾರೆ.
ಶ್ರೀಕಾಂತ್ ಅಂದ್ರೆ ನೆನಪಾಗೋದೇ ಹೊಡಿಬಡಿ ಆಟ. ಹಿಂದೊಮ್ಮೆ ಸ್ವತಃ ಕಪಿಲ್ ದೇವ್ ಕೂಡ ಶ್ರೀಕಾಂತ್ ಅವರ ಬ್ಯಾಟಿಂಗ್ ಬಗ್ಗೆ ಹೇಳಿದ್ದರು. ಭಾರತದಲ್ಲಿ ಟಿ-ಟ್ವೆಂಟಿ ಆಟ 1985ರಲ್ಲೇ ಶುರುವಾಗಿತ್ತು. ಶ್ರೀಕಾಂತ್ ಟಿ-ಟ್ವೆಂಟಿ ಶೈಲಿಯಂತೆ ಬ್ಯಾಟ್ ಬೀಸುತ್ತಿದ್ದರು. ಅದ್ರಲ್ಲೂ 1985ರಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಶ್ರೀಕಾಂತ್ ಅವರು, ಇಮ್ರಾನ್ ಖಾನ್, ವಾಸೀಮ್ ಅಕ್ರಮ್ ಅವರ ಎಸೆತಗಳಿಗೆ ಹೊಡೆಯುತ್ತಿದ್ದ ರೀತಿಯನ್ನು ನೋಡಿದಾಗ ಈತ ಏನು ಮಾಡುತ್ತಿದ್ದಾನೆ ಅಂತ ನಾವು ಮಾತನಾಡಿಕೊಳ್ಳುತ್ತಿದ್ದೇವು ಅಂತ ಹಿಂದೊಮ್ಮೆ ಕಪಿಲ್ ದೇವ್ ಹೇಳಿದ್ದರು. ಒಂದು ವೇಳೆ ಆ ಕಾಲದಲ್ಲಿ ಟಿ-ಟ್ವೆಂಟಿ ಕ್ರಿಕೆಟ್ ಇರುತ್ತಿದ್ರೆ ಶ್ರೀಕಾಂತ್ ಮತ್ತು ಗವಾಸ್ಕರ್ ಬಹು ಬೇಡಿಕೆಯ ಆಟಗಾರರಾಗುತ್ತಿದ್ದರು ಎಂಬುದನ್ನು ಇತ್ತೀಚೆಗೆ ಕಪಿಲ್ ದೇವ್ ಕೂಡ ಹೇಳಿದ್ದರು.
ಗವಾಸ್ಕರ್ ಮತ್ತು ಶ್ರೀಕಾಂತ್ ಅವರು 55 ಏಕದಿನ ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. 31ರ ಸರಾಸರಿಯಂತೆ ಸರಿ ಸುಮಾರು 1680 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 11 ಅರ್ಧಶತಕದ ಜೊತೆಯಾಟವಾದ್ರೆ, ಎರಡು ಶತಕದ ಜೊತೆಯಾಟವೂ ಇದೆ. ಇದು ಭಾರತದ ಪರ 5ನೇ ಗರಿಷ್ಠ ಜೊತೆಯಾಟದ ರನ್ ದಾಖಲಿಸಿದ್ದ ದಾಖಲೆಯೂ ಹೌದು. ಸಚಿನ್ -ಗಂಗೂಲಿ ಜೊತೆಯಾಟ ಅಗ್ರಸ್ಥಾನದಲ್ಲಿದ್ರೆ, ಶಿಖರ್ ಧವನ್ – ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೇ ತೆಂಡುಲ್ಕರ್ -ಸೆಹ್ವಾಗ್ ಹಾಗೂ ಸೆಹ್ವಾಗ್ -ಗಂಭೀರ್ ಜೊತೆಯಾಟ ತಲಾ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.








