ಕಾಂಗ್ರೆಸ್ ಸೇರುವ ಬಗ್ಗೆ ಶ್ರೀನಿವಾಸ ಗೌಡ ಸ್ಪಷ್ಟನೆ
ಕೋಲಾರ : ಜಿ.ಟಿ.ದೇವೆಗೌಡ ಬಳಿಕ ಮತ್ತೊಬ್ಬ ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕೋಲಾರದ ಶಾಸಕ ಶ್ರೀನಿವಾಸ ಗೌಡ ಇಂದು ಸುದ್ದಿಗೋಷ್ಠಿ ನಡೆಸಿ “ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತೇನೆ” ಎಂದು ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೊದಲು ಜೆಡಿಎಸ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಶ್ರೀನಿವಾಸ ಗೌಡ, ಕೆ ಸಿ ವ್ಯಾಲಿ ಯೋಜನೆ ಕುರಿತು ರಮೇಶ್ ಕುಮಾರ್ ಹಾಗೂ ಕೃಷ್ಣ ಭೈರೇಗೌಡರನ್ನು ಹೊಗಳಿದಕ್ಕೆ ಅವರಿಗೆ ಬಾಧೆಯಾಗಿದೆ.
ಹೀಗಾಗಿ, ನನ್ನನ್ನ ಬುಧುವಾರ ಪಕ್ಷದಿಂದ ಉಚ್ಛಾಟಿಸಿದ್ದಾರೆ. ದೇವೇಗೌಡ್ರು ಹಾಗೂ ಅವರ ಮಕ್ಕಳು ಬಹಳ ದೊಡ್ಡವರು.
ಕೆ ಸಿ ವ್ಯಾಲಿ ಯೋಜನೆಯನ್ನ ಕೊಚ್ಚೆ ನೀರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅದೇ ಕೊಚ್ಚೆ ನೀರನ್ನ ನಾನು ಕುಡಿದಿಲ್ವಾ? ಸತ್ತೋಗಿದಿನಾ ನಾನು ಎಂದು ಪ್ರಶ್ನಿಸಿದರು.
ಇದೇ ವೇಳೆ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪಕ್ಷದಿಂದ ಉಚ್ಚಾಟನೆ ಮಾಡಿರೋದು ಬಹಳ ಸಂತೋಷ ಎಂದರು.
ಇನ್ನು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಈಗಾಗಲೇ ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಚರ್ಚೆ ನಡೆಸಿದ್ದೇನೆ. ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನನ್ನ ಮಗ ರಮೇಶ್ ಕುಮಾರ್ ವ್ಯಾಪ್ತಿಗೆ ಬರುವ ಹೊಳೋರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎಂದರು.









