ಮಂಗಳೂರು: ಕಂಬಳ ಸ್ಪರ್ಧೆಯಲ್ಲಿ 142.50 ಮೀಟರ್ ಅನ್ನು ಕೇವಲ 13.62 ಸೆಕೆಂಡ್‌ಗೆ ಓಡಿ ಇಡೀ ದೇಶದ ಗಮನ ಸೆಳೆಯುತ್ತಿರುವ ಶ್ರೀನಿವಾಸ ಗೌಡ ಅವರ ಬಗ್ಗೆ ಕುತೂಹಲಕಾರಿ ಮಾಹಿತಿವೊಂದು ಹೊರಬಿದ್ದಿದೆ. ಕಂಬಳದಲ್ಲಿ ಕಣ್ಣು ಮುಚ್ಚಿ ತೆರೆಯುವುದರಲ್ಲಿ 142.50 ಮೀಟರ್ ಅನ್ನು ಕೇವಲ 13.62 ಸೆಕೆಂಡ್ ಗೆ ಓಡಿರುವ ಶ್ರೀನಿವಾಸ್ ಅವರು ಬಾಹುಬಲಿ-2 ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ, ದೇವಸೇನಾ ರಾಜ್ಯಕ್ಕೆ ಬಂದಾಗ ಗೂಳಿಗಳನ್ನು ಓಡಿಸುವ ದೃಶ್ಯಗಳನ್ನು ತೋರಿಸಲಾಗುತ್ತದೆ. ಇಲ್ಲಿ ಗೂಳಿಗಳನ್ನು ಓಡಿಸಿದ್ದು ಬೇರೆ ಯಾರು ಅಲ್ಲ ನಮ್ಮ ಶ್ರೀನಿವಾಸ್ ಗೌಡ ಅವರೇ. ಹೌದು..! ಶ್ರೀನಿವಾಸ್ ಗೌಡ ಅವರು ಕಂಬಳದಲ್ಲಿ ವೇಗವಾಗಿ ಓಡ್ತಿದ್ದನ್ನು ಗುರುತಿಸಿದ್ದ ಬಾಹುಬಲಿ ಸಿನಿಮಾ ತಂಡದವರು, ಹೈದ್ರಾಬಾದ್ ನ ರಾಮೋಜಿ ಫಿಲಂಸಿಟಿಗೆ ಶ್ರೀನಿವಾಸ್ ಅವರನ್ನು ಕರೆಯಿಸಿಕೊಂಡಿದ್ದರು. ಬಾಹುಬಲಿ ಸೆಟ್ ನಲ್ಲಿ 11 ತಿಂಗಳುಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಶ್ರೀನಿವಾಸ್ ಅವರು, ಸಿನಿಮಾದಲ್ಲಿ ಬರುವ ಗೂಳಿ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.








