ಚಿತ್ರದುರ್ಗ : ಆರೋಗ್ಯ ಸಚಿವ ಶ್ರೀರಾಮುಲು ಅವರ ಭಗವಂತನೇ ಕೊರೊನಾದಿಂದ ನಮ್ಮನ್ನು ಕಾಪಾಡಬೇಕು ಎಂಬ ಹೇಳಿಕೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಧೈರ್ಯ ತುಂಬಬೇಕಿದ್ದ ಆರೋಗ್ಯ ಸಚಿವರೇ ಈ ರೀತಿ ಅಸಹಾಯಕತೆಯ ಹೇಳಿಕೆಗಳನ್ನು ನೀಡೋದು ಎಷ್ಟು ಸರಿ ಎಂದೆಲ್ಲಾ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಹೇಳಿಕೆ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಅಸಹಾಯಕತೆಯಿಂದ ಭಗವಂತನೇ ಕಾಪಾಡಬೇಕು ಎಂದು ನಾನು ಹೇಳಿಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ಇತರ ಕೆಲ ಜಿಲ್ಲೆಗಳನ್ನೂ ಲಾಕ್ ಡೌನ್ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಜನರು ಸಹಕಾರ ನೀಡಬೇಕು. ಜನರ ಸಹಕಾರದ ಜೊತೆ ದೇವರು ಸಹ ನಮ್ಮನ್ನು ಕಾಪಾಡಬೇಕು ಎಂದಿದ್ದೇನೆ. ಕೊರೊನಾಗೆ ವ್ಯಾಕ್ಸಿನ್ ಬಂದರೂ ಅಂತಿಮವಾಗಿ ನಮ್ಮನ್ನೆಲ್ಲ ಕಾಪಾಡುವುದು ದೇವರು ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.