ಆರ್ ಆರ್ ಆರ್..! ಬಾಹುಬಲಿ ಸೃಷ್ಠಿಕರ್ತ, ಸಿನಿಮಾ ಮಾಂತ್ರಿಕ, ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಬತ್ತಳಿಕೆಯಿಂದ ಬರ್ತಾ ಇರೋ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಿನಿರಸಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಅದಕ್ಕೆ ಕಾರಣ ಆರ್ ಆರ್ ಆರ್.. ಅಂದ್ರೆ ರಾಮ್ ಚರಣ್, ರಾಮಾರಾವ್, ರಾಜಮೌಳಿ.
ಹೌದು..! ಬಾಹುಬಲಿ ಸಿನಿಮಾದ ನಂತ್ರ ರಾಜಮೌಳಿ ಆರ್ ಆರ್ ಆರ್ ಸಿನಿಮಾವನ್ನು ಘೋಷಿಸಿದ್ರು. ಅದರಲ್ಲೂ ಈ ಸಿನಿಮಾದಲ್ಲಿ ತೆಲುಗಿನ ಬಿಗ್ ಸ್ಟಾರ್ ಗಳಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಯಂಗ್ ಟೈಗರ್ ಜ್ಯು. ಎನ್ ಟಿಆರ್ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ. ಇಡೀ ಭಾರತೀಯ ಚಿತ್ರರಂಗದ ದೃಷ್ಠಿ ಈ ಸಿನಿಮಾ ಮೇಲೆ ನೆಟ್ಟಿತ್ತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಿನಿರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ಯುಗಾದಿ ಹಬ್ಬದ ದಿನ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನ ಡಬಲ್ ಮಾಡಿದೆ.
ಪಂಚ ಭಾಷೆಗಳಲ್ಲಿ ರೆಡಿಯಾಗ್ತಿರುವ ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ನಟನೆಯ ಆರ್ ಆರ್ ಆರ್ ಮೋಷನ್ ಪೋಸ್ಟರ್ ಹಾಗೂ ರಾಮ್ ಚರಣ್ ತೇಜಾ ಫಸ್ಟ್ ಲುಕ್ ಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಖುಷಿಯಾಗಿರುವ ನಿರ್ದೇಶಕ ರಾಜಮೌಳಿ ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಈ ಬಗ್ಗೆ ಅವರು ಕನ್ನಡದಲ್ಲೇ ಪೋಸ್ಟ್ ಮಾಡಿದ್ದು, ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದ್ದಾರೆ.







