ಎಸ್.ಎಸ್.ಎಲ್.ಸಿ ಪರೀಕ್ಷೆ ಯಶಸ್ವಿ – ಪೊಳಲಿಯಲ್ಲಿ ಪ್ರಾರ್ಥನೆ ಸಲ್ಲಿಸಲಿರುವ ಶಿಕ್ಷಣ ಸಚಿವರು
ಬೆಂಗಳೂರು, ಜುಲೈ 10: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದು ಬಂಟ್ವಾಳಕ್ಕೆ ಆಗಮಿಸಿ ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಎಸ್.ಎಸ್.ಎಲ್. ಪರೀಕ್ಷೆ ಯಶಸ್ವಿಯಾಗಿ ಮುಗಿದ ಹಿನ್ನಲೆಯಲ್ಲಿ ಸಚಿವರು ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಶಿಕ್ಷಣ ಸಚಿವರು ಈ ಹಿಂದೆ ಆಗಮಿಸಿದ್ದಾಗ, ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದರೆ ಪೊಳಲಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ನಡೆಯಬೇಕಿದ್ದ ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಹಲವು ಅನಿಶ್ಚಿತತೆಯ ನಡುವೆ ಜೂನ್ 25ರಂದು ಪರೀಕ್ಷೆ ಪ್ರಾರಂಭವಾಗಿ, ಜುಲೈ 4ರಂದು ಯಶಸ್ವಿಯಾಗಿ ಪೂರ್ಣಗೊಂಡಿತು. ಸರ್ಕಾರಕ್ಕೆ ಕೊರೊನಾ ಸೋಂಕಿನ ನಡುವೆ ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಯಾವ ಸಮಸ್ಯೆಗಳು ಎದುರಾಗದಂತೆ ಯಶಸ್ವಿಯಾಗಿ ಮಾಡಿ ಮುಗಿಸುವುದು ದೊಡ್ಡ ಸವಾಲಾಗಿತ್ತು.