ಬೆಂಗಳೂರು, ಜೂನ್ 25: ರಾಜ್ಯದಲ್ಲಿ ಇಂದು ಕೊರೊನಾ ಆತಂಕದ ನಡುವೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿದೆ. 10ನೇ ತರಗತಿ ಪರೀಕ್ಷೆ ಬರೆಯಲು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷೆಯನ್ನು ಬರೆದರು. ಕೊರೊನಾ ಭೀತಿಯಿಂದ ಈ ಬಾರಿ ಪರೀಕ್ಷೆ ನಡೆಸುವುದು ಸವಾಲಾಗಿ ಪರಿಣಮಿಸಿತ್ತು. ಆದರೆ ಶಿಕ್ಷಣ ಇಲಾಖೆಯೊಂದಿಗೆ ಸರ್ಕಾರವು ಕೈಜೋಡಿಸಿ ಈ ಸವಾಲನ್ನು ಸಮರ್ಥವಾಗಿ ಎದುರಿಸಿದೆ.
ಬೆಳಿಗ್ಗೆ 7.30ರಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆದಿದೆ. ಇಂದು ಪ್ರಥಮ ಭಾಷಾ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ದು, ಜುಲೈ 4 ರಂದು ಪರೀಕ್ಷೆ ಮುಕ್ತಾಯಗೊಳ್ಳಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತ ಮಾಸ್ಕ್ ಅನ್ನು ವಿತರಿಸಲಾಯಿತು. ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು. ಸೋಂಕು ಲಕ್ಷಣವಿರುವ ಮಕ್ಕಳಿಗೆ ಮತ್ತು ಕಂಟೈನ್ ಮೆಂಟ್ ವಲಯದಲ್ಲಿರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಸೋಂಕು ಪೀಡಿತ ಮತ್ತು ಕ್ವಾರಂಟೈನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸದೆ, ಪೂರಕ ಪರೀಕ್ಷೆಯಲ್ಲಿ ಮೊದಲ ಅವಕಾಶದಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.