ಸಿಪಿಎಲ್ 2020- ಬಾರ್ಬೊಡಸ್ ವಿರುದ್ಧ ಜಯ ಸಾಧಿಸಿದ ಸೇಂಟ್ ಲೂಸಿಯಾ ಝೌಕ್ಸ್..!
ಮೊದಲ ಸೋಲಿನಿಂದ ಎಚ್ಚೆತ್ತುಕೊಂಡ ಸೇಂಟ್ ಲೂಸಿಯಾ ಝೌಕ್ಸ್ ತಂಡ ತನ್ನ ಎರಡನೇ ಪಂದ್ಯಲ್ಲಿ ಗೆಲುವು ಸಾಧಿಸಿದೆ. ಎಂಟನೇ ಆವೃತ್ತಿಯ ಕೆರೆಬಿಯನ್ ಪ್ರೀಮಿಯರ್ ಲೀಗ್‍ನ ಐದನೇ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಪಡಿಸಿತ್ತು. ಹೀಗಾಗಿ ಡಕ್ ವರ್ತ್ ನಿಯದ ಪ್ರಕಾರ ಸೇಂಟ್ ಲೂಸಿಯಾ ತಂಡ ಏಳು ವಿಕೆಟ್ ಗಳಿಂದ ಬಾರ್ಬೋಡಸ್ ಟ್ರಿಡೆಂಟ್ಸ್ ತಂಡವನ್ನು ಮಣಿಸಿತ್ತು.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಜಾನ್ಸನ್ ಚಾಲ್ರ್ಸ್ ಮತ್ತು ಕೊರಿ ಆಂಡರ್ಸನ್ ತಂಡಕ್ಕೆ ಉತ್ತಮ ಆರಂಭ ನೀಡಿದ್ರು. 3.3 ಓವರ್ ಗಳಲ್ಲಿ 35 ರನ್‍ಗಳ ಜೊತೆಯಾಟವನ್ನು ಆಡಿದ್ದರು. ಈ ಹಂತದಲ್ಲಿ ಜಾನ್ಸನ್ ಚಾಲ್ರ್ಸ್ ಅವರು 35 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ನಂತರ ಕೋರಿ ಆಂಡರ್ಸನ್ 19 ರನ್‍ಗೆ ಸುಸ್ತಾದ್ರು. ಬಳಿಕ ಟ್ರಿಡೆಂಟ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ನಿರೀಕ್ಷಿತ ಮಟ್ಟದ ಆಟವನ್ನಾಡಲಿಲ್ಲ. ನಾಯಕ ಜೇಸನ್ ಹೊಲ್ಡರ್ 27 ರನ್ ಗಳಿಸಿದ್ರು. ಅಂತಿಮವಾಗಿ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 131 ರನ್ ದಾಖಲಿಸಿತ್ತು.
ಸಾಧಾರಣ ಮೊತ್ತದ ಸವಾಲನ್ನು ಬೆನ್ನಟ್ಟಿದ್ದ ಸೇಂಟ್ ಲೂಸಿಯಾ ಝೌಕ್ಸ್ ತಂಡಕ್ಕೆ ಮಳೆರಾಯ ಅಡ್ಡಿಪಡಿಸಿದ್ದ. ಹೀಗಾಗಿ ಸೇಂಟ್ ಲೂಸಿಯಾ ತಂಡಕ್ಕೆ 5 ಓವರ್ ಗಳಲ್ಲಿ ಗೆಲ್ಲಲು 47 ರನ್‍ಗಳನ್ನು ಒಡ್ಡಲಾಗಿತ್ತು. ಬಿರುಸಿನ ಬ್ಯಾಟಿಂಗ್ ನಡೆಸಿದ್ದ ರಕೀಮ್ ಕಾರ್ನ್‍ವೆಲ್ ಎಂಟು ಎಸೆತಗಳಲ್ಲಿ 14 ರನ್ ಗಳಿಸಿದ್ರೆ, ಮಹಮ್ಮದ್ ನಭೀ 6 ಎಸೆತಗಳಲ್ಲಿ 15 ರನ್ ಗಳಿಸಿದ್ರು. ಇನ್ನೊಂದೆಡೆ ಆರಂಭಿಕ ಫ್ಲೇಚರ್ ಏಳು ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಸೇಂಟ್ ಲೂಸಿಯಾ ತಂಡ 4.1 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 50 ರನ್ ಗಳಿಸಿತ್ತು. ಆಲ್‍ರೌಂಡ್ ಪ್ರದರ್ಶನ ನೀಡಿದ್ದ ಮಹಮ್ಮದ್ ನಭೀ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ನಭೀ ಅವರು ಎರಡು ವಿಕೆಟ್ ಮತ್ತು ಅಮೂಲ್ಯ 15 ರನ್ ಕೂಡ ದಾಖಲಿಸಿದ್ದರು.