ರಾಜ್ಯ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ : ಇದು ಪ್ರತಿಷ್ಠೆಗಾಗಿ ನಡೆಯುತ್ತಿರೋ ಫೈಟ್..!
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನ ವೇದಿಕೆ ಮೇಲೆ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಆದರೆ ಅಂದು ಒಗ್ಗಟ್ಟಿನಲ್ಲಿ ಬಲ ಇದೆ ಎಂದಿದ್ದವರೇ ಇಂದು ದೂರ ದೂರ ಹೋದಂತೆ ಕಾಣುತ್ತಿದೆ. ರಾಜ್ಯ ಸರ್ಕಾರದ ಸಚಿವರಲ್ಲಿ ಸಮನ್ವಯತೆಯೇ ಇಲ್ಲ ಎಂದು ಟೀಕೆ ಮಾಡುತ್ತಿರುವ ಕೈ ನಾಯಕರ ನಡುವೆಯೇ ಈಗ ಅಸಮನ್ವಯತೆ ಎದ್ದು ಕಾಣುತ್ತಿದೆ.
ಇದಕ್ಕೆ ತಾಜಾ ನಿದರ್ಶನವೆಂದರೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಆರಂಭಿಸಿರುವ ಅಭಿಯಾನಗಳು. ಹೌದು..! ಒಂದು ಕಡೆ ಕಾಂಗ್ರೆಸ್ ನ ಹುಲಿಯಾ ಸಿದ್ದರಾಮಯ್ಯ, ಕೊರೊನಾ ಸಾಮಗ್ರಿ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ `ಲೆಕ್ಕಕೊಡಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಮತ್ತೊಂದಡೆ ರಾಜ್ಯ ಕಾಂಗ್ರೆಸ್ ಸಾರಥಿ ಡಿ.ಕೆ ಶಿವಕುಮಾರ್ ಅವರು `ಉತ್ತರಕೊಡಿ’ ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ.
ಇದೇ ಈಗ ಚರ್ಚೆಗೆ ಗ್ರಾಸವಾಗಿದ್ದು, ಇಬ್ಬರಲ್ಲೂ ಸಮನ್ವಯತೆ ಇದ್ದರೇ, ಪ್ರತ್ಯೇಕ ಅಭಿಯಾನ ಆರಂಭಿಸುವ ಅವಶ್ಯಕತೆ ಏನಿತ್ತು..? ಇಬ್ಬರ ನಡುವೆ ಇನ್ನೂ ಮುಸುಕಿನ ಗುದ್ದಾಟ ನಡೆಯುತ್ತಿದ್ಯಾ..? ಎಂಬ ಅನುಮಾನಗಳು ಮೂಡಲು ಶುರುವಾಗಿದೆ.
ಅಲ್ಲದೆ ಸಿದ್ದರಾಮಯ್ಯ ಲೆಕ್ಕಕೊಡಿ ಎಂಬ ಅಭಿಯಾನ ಆರಂಭಿಸುತ್ತಾ ಪಕ್ಷದ ನಾಯಕರಿಗೆ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಿದ್ದರು. ಆದ್ರೆ ಈವರೆಗೂ ಯಾವ ಕೈ ನಾಯಕರೂ ಸಿದ್ದು ಅಭಿಯಾನಕ್ಕೆ ಬೆಂಬಲ ಸೂಚಿಸಿದಂತೆ ಕಾಣುತ್ತಿಲ್ಲ. ಅದರಲ್ಲೂ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಪ್ರತ್ಯೇಕ ಅಭಿಯಾನ ಆರಂಭಿಸಿರುವುದರಿಂದ ಸಾಂಘಿಕತೆಯಿಂದ ಒಂದೇ ಅಭಿಯಾನಕ್ಕೆ ಬಲ ತುಂಬಲು ನಾಯಕರು ‘ಕೈ’ ಜೋಡಿಸದಿರುವುದು ಇಲ್ಲಿ ಸ್ಪಷ್ಟವಾಗಿದೆ.
ಒಟ್ಟಿನಲ್ಲಿ ಈ ಮೊದಲು ಒಗ್ಗಟ್ಟಿನ ಮಂತ್ರ ಜಪಿಸಿದ್ದ ಕಾಂಗ್ರೆಸ್ ಕಲಿಗಳು, ಈಗ ಪ್ರತಿಷ್ಟೆಗಾಗಿ ಗುದ್ದಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.
ಮಹೇಶ್ ಎಂ ದಂಡು








