ರಾಜ್ಯದಲ್ಲಿ ಆಕ್ಸಿಜನ್ ಕೊರತೆ | ಕೇಂದ್ರ ಸಚಿವರೊಂದಿಗೆ ಶೆಟ್ಟರ್ ಸಮಾಲೋಚನೆ
ಬೆಂಗಳೂರು : ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸಚಿವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅನುಮತಿ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಮತ್ತು ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗಿನ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಬಳ್ಳಾರಿಯ ಜಿಂದಾಲ್ ನಲ್ಲಿ ಈಗಾಗಲೇ ಉತ್ಪಾದನೆ ಹೆಚ್ಚಾಗಿದೆ. ಅಲ್ಲದೆ, ಕೇಂದ್ರ ಸರಕಾರ ಹೊರ ರಾಜ್ಯಗಳಿಂದ ಆಮ್ಲಜನಕ ಹಂಚಿಕೆಯನ್ನು ನೀಡಿದೆ. ಆದರೆ, ದೂರದ ರಾಜ್ಯಗಳಿಂದ ಆಮ್ಲಜನಕವನ್ನು ರಾಜ್ಯಕ್ಕೆ ತರಿಸಿಕೊಳ್ಳುವುದು ಬಹಳ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿರುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡಿ ಅದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಹಾಗೂ ಪ್ರಹ್ಲಾದ್ ಜೋಷಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆ ಸರಬರಾಜಿನಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಮ್ಲಜನಕ ಸಾಗಾಣಿಕಾ ಟ್ಯಾಂಕ್‍ರ್‍ಗಳು:
ರಾಜ್ಯದಲ್ಲಿ ಪ್ರಸ್ತುತ 170 ಆಮ್ಲಜನಕ ಸಾಗಾಣಿಕಾ ಟ್ಯಾಂಕರ್ ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 68 ಟ್ಯಾಂಕರ್‍ಗಳು ಬೇರೆ ರಾಜ್ಯಕ್ಕೆ ಪೂರೈಕೆ ಮಾಡುವ ಕಾರ್ಯದಲ್ಲಿವೆ. ರಾಜ್ಯಕ್ಕೆ ಇನ್ನಷ್ಟು ಟ್ಯಾಂಕರ್‍ಗಳ ಅವಶ್ಯಕತೆ ಇದ್ದು, ಇನ್ನೂ ಹೆಚ್ಚಿನ ಟ್ಯಾಂಕರ್ ಗಳನ್ನು ಮಾರ್ಪಾಡಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿ ಸೂಚನೆ ನೀಡಿದರು.
ಇತರೆ ರಾಜ್ಯಗಳಿಂದ ಶೀಘ್ರ ಆಮ್ಲಜನಕ ತರಲು ರೈಲ್ವೇ ಟ್ಯಾಂಕರ್‍ಗಳ ಬಳಕೆ:
ದೂರದ ಓರಿಸ್ಸಾ ಹಾಗೂ ಇನ್ನಿತರೆ ರಾಜ್ಯಗಳಿಂದ ಆಮ್ಲಜನಕ ಸಾಗಾಣಿಕೆಯನ್ನು ಚುರುಕುಗೊಳಿಸಲು ಹಾಗೂ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೈಲ್ವೇ ಟ್ಯಾಂಕರ್‍ಗಳ ಬಳಕೆ ಅವಶ್ಯಕ. ಈ ನಿಟ್ಟಿನಲ್ಲಿ 4 ಕಂಟೇನರ್‍ಗಳು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಲಭಿಸಲಿದೆ. ಇವುಗಳ ಮೂಲಕ 80 ಎಂ.ಟಿ ಯಷ್ಟು ಆಮ್ಲಜನಕ ರಾಜ್ಯಕ್ಕೆ ತರಬಹುದಾಗಿದೆ.
ಜಿಂದಾಲ್ ಮುಖ್ಯಸ್ಥರೊಂದಿಗೆ ಮಾತನಾಢಿದ್ದು ಸ್ಟೀಲ್ ಉತ್ಪಾದನೆಯನ್ನು ಕಡಿಮೆಗೊಳಿಸಿ ಆಮ್ಲಜನಕ ಉತ್ಪಾದನೆ ಹೆಚ್ಚಿಸುವಂತೆ ಸೂಚನೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಅವರು ಈಗಾಗಲೇ ಕಾರ್ಯಪ್ರಾರಂಭಿಸಿದ್ದು ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕ ದೊರೆಯಲಿದೆ. ರಾಜ್ಯದಲ್ಲಿರುವ ಕಠಿಣ ಪರಿಸ್ಥಿತಿಯನ್ನು ಕೇಂದ್ರ ಸರಕಾರಕ್ಕೆ ವಿವರಿಸಿದ್ದು ಕೇಂದ್ರ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.