ರಾಜ್ಯ ಸರಕಾರಗಳು ಉಚಿತ ಮತ್ತು ಸಾಲಮನ್ನಾದಂತಹ ಯೋಜನೆಗಳನ್ನು ನಿಲ್ಲಿಸಿ : ಆರ್ಥಿಕ ತಜ್ಞರು
ನವದೆಹಲಿ: ರಾಜ್ಯ ಸರಕಾರಗಳು ಉಜಿತ ಕೊಡುಗೆಗಳು ಮತ್ತು ರೈತರ ಸಾಲಮನ್ನಾದಂತಹ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಆರ್ಥಿಕ ತಜ್ಞರು ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಕಾರಣದಿಂದ ದೇಶದ ಆರ್ಥಿಕತೆ ಹೊಡೆತ ಬಿದ್ದಿದೆ. ಹೀಗಾಗಿ ಕೇಂದ್ರ ಸರ್ಕಾರ ಜೂನ್‌ನಲ್ಲಿ ಜಿಎಸ್‌ಟಿ ಪರಿಹಾರವನ್ನು ಸ್ಥಗಿತಗೊಳಿಸಲಿದೆ. ಈ ಸಂಬಂಧ ರಾಜ್ಯ ಸರ್ಕಾರಗಳು ತಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿಕೊಂಡು ಹೋಗದಿದ್ದರೆ, ಮುಂದೆ ಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಆರ್ಥಿಕ ಸಲಹೆ ನೀಡಿದ್ದಾರೆ.
ಅಲ್ಲದೇ ಇತ್ತೀಚೆಗೆ ಕೆಲ ಆರ್ಥಿಕ ತಜ್ಞರು ಉಚಿತ ಕೊಡುಗೆ ಹಾಗೂ ಸಬ್ಸಿಡಿಗಳಿಗೆ ಕಡಿವಾಣ ಹಾಕದಿದ್ದರೆ ಭಾರತಕ್ಕೂ ಶ್ರೀಲಂಕಾದ ಸ್ಥಿತಿ ಬರಬಹುದು ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಎಸ್‌ಬಿಐ ಮುಖ್ಯ ಆರ್ಥಿಕ ಸಲಹೆಗಾರರ ಸಮಿತಿಯೊಂದು ಅಧ್ಯಯನ ನಡೆಸಿ ರಾಜ್ಯಗಳಿಗೂ ವರದಿ ನೀಡಿದೆ.
ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ತೆರಿಗೆಯ ಪಾಲು ರಾಜ್ಯಗಳ ಒಟ್ಟು ಆದಾಯದಲ್ಲಿ 5ನೇ ಒಂದರಷ್ಟು ಮಾತ್ರ ಆಗುತ್ತದೆ. ತೆಲಂಗಾಣ ರಾಜ್ಯ ತನ್ನ ಒಟ್ಟು ಆದಾಯದ ಶೇ.35 ರಷ್ಟು, ರಾಜಸ್ಥಾನ, ಛತ್ತೀಸ್‌ಗಢ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳು ಶೇ.5 ರಿಂದ ಶೇ.19 ರಷ್ಟು ಆದಾಯವನ್ನು ಇಂತಹ ಜನಪ್ರಿಯ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ರಾಜ್ಯಗಳು ತಮ್ಮ ಆದಾಯವನ್ನು ಮೀರಿ ಖರ್ಚು ಮಾಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಿಹಾರದ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 8.3ರಷ್ಟಿದೆ. ಅಂದರೆ ಬಜೆಟ್ ಅಂದಾಜಿಗಿಂತ 54,327 ಕೋಟಿ ರೂಪಾಯಿ ಹೆಚ್ಚಿಗೆ ವೆಚ್ಚ ಮಾಡಲಾಗಿದೆ. ಹಾಗೇ ಅಸ್ಸಾಂನ ವಿತ್ತೀಯ ಕೊರತೆಯು ಶೇಕಡಾ 4.5ರಷ್ಟಿದೆ. ಅಂದರೆ ಅದು ಘೋಷಿಸಿದ್ದ ಆದಾಯಕ್ಕಿಂತ 21,935 ಕೋಟಿ ಹೆಚ್ಚಿಗೆ ವೆಚ್ಚ ಮಾಡಿದೆ. ಈ ಎರಡು ರಾಜ್ಯಗಳಲ್ಲಿ, ವಿತ್ತೀಯ ಕೊರತೆಯು ಗಮನಾರ್ಹವಾಗಿ ಏರಿಕೆಯಾಗಿದೆ.
ಇನ್ನೂ ಅರುಣಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಬಜೆಟ್ ಗುರಿಗಿಂತ ಹೆಚ್ಚಿನ ವಿತ್ತೀಯ ಕೊರತೆಯನ್ನು ವರದಿ ಮಾಡಿದೆ. ಈ ತಿಂಗಳು ಆರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಜ್ಯಗಳ ಕಡಿಮೆ ವಿತ್ತೀಯ ಕೊರತೆ ಶೇಕಡಾ 3.4ರಷ್ಟಿದೆ. 18 ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು 7.2 ಲಕ್ಷ ಕೋಟಿ ರೂಪಾಯಿ ಇದೆ.ಕೆಲವು ರಾಜ್ಯಗಳಲ್ಲಿ ಹಣಕಾಸಿನ ಶಿಸ್ತಿಲ್ಲದ ಕಾರಣದಿಂದ ಆದಾಯ ಸಂಗ್ರಹಣೆ ಕಾರ್ಯ ಕಷ್ಟಕರವಾಗಿದೆ.