ಶಿವಮೊಗ್ಗ: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟವಾಗಿದ್ದು, ದಾವಣಗೆರೆಯಲ್ಲಿ ಬಿ.ವೈ. ವಿಜಯೇಂದ್ರ ಪರ ಶಾಸಕರು ಸಭೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ಸ್ಥಾನ ಖಾಲಿಯಾಗುವ ನಿರೀಕ್ಷೆ ಇದೆ. ನಾನು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಕಳೆದ 30 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಕಾಂಗ್ರೆಸ್ ಅಹಿಂದ ಸಂಘಟನೆಯಾಗಿದೆ. ಅದಕ್ಕೆ ವಿರೋಧವಾಗಿ ಬಿಜೆಪಿ ಒಬಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದೆ. ಒಬಿಸಿ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಬಂದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ ಎಂದು ಹೇಳಿದ್ದಾರೆ.








