ʼಭಾರತ ತಂಡದ ಈಗಿನ ಆಟಗಾರರು ಹಣವಿದೆ ಎಂಬ ಕಾರಣದಿಂದ ದುರಹಂಕಾರಿಗಳಾಗಿದ್ದಾರೆ” ಎಂಬ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿಕೆಗೆ ಆಲ್ರೌಂಡರ್ ರವೀಂದ್ರ ಜಡೇಜಾ ತಿರುಗೇಟು ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರು ತೋರಿದ ಪ್ರದರ್ಶನದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್, “ಭಾರತ ತಂಡದ ಈಗಿನ ಆಟಗಾರರು ತಮ್ಮ ಬಳಿ ಸಾಕಷ್ಟು ಹಣವಿದೆ ಎಂಬ ಕಾರಣಕ್ಕೆ ಮಾಜಿ ಆಟಗಾರರ ಬಳಿ ಸಲಹೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ತಮಗೆ ಎಲ್ಲವೂ ಗೊತ್ತಿದೆ ಎಂಬ ದುರಹಂಕಾರ ಹಾಗೂ ಜಂಬ ಈಗಿನ ಕ್ರಿಕೆಟಿಗರ ತಲೆಯಲ್ಲಿ ತುಂಬಿದೆ” ಎಂಬ ಹೇಳಿಕೆ ನೀಡಿದ್ದರು.
ಆದರೆ ಮಾಜಿ ಕ್ರಿಕೆಟಿಗನ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, “ಭಾರತ ಸೋತಾಗ ಮಾತ್ರವೇ ಈ ಆರೋಪಗಳು ಉದ್ಭವಿಸುತ್ತವೆ. ತಂಡದ ಎಲ್ಲ ಆಟಗಾರರು ತಮ್ಮ ದೇಶವನ್ನು ಪ್ರತಿನಿಧಿಸುವಲ್ಲಿ ತೊಡಗಿದ್ದಾರೆ ಮತ್ತು ಅದರ ಬಗ್ಗೆ ಹೆಚ್ಚಿನ ಗಮನವಹಿಸಿದ್ದಾರೆ” ಎಂದು ಕಪಿಲ್ ದೇವ್ ಅವರ ಆರೋಪ ತಳ್ಳಿಹಾಕಿದ್ದಾರೆ.
“ಅವರು(ಕಪಿಲ್ ದೇವ್) ಇದನ್ನು ಯಾವಾಗ ಹೇಳಿದ್ದಾರೆಂಬುದು ನನಗೆ ತಿಳಿದಿಲ್ಲ. ನಾನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವಿಷಯವನ್ನ ಹುಡುಕುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯವಿದೆ, ಎಲ್ಲರೂ ಅವರ ಆಟವನ್ನು ಆನಂದಿಸುತ್ತಿದ್ದಾರೆ ಮತ್ತು ಶ್ರಮಿಸುತ್ತಿದ್ದಾರೆ. ಆಟಗಾರರು ತಮ್ಮ ಸ್ಥಾನವನ್ನ ಪಡೆದುಕೊಳ್ಳುತ್ತಿದ್ದು, ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ತಂಡಕ್ಕಾಗಿ 100% ಪರಿಶ್ರಮ ನೀಡುತ್ತಿದ್ದಾರೆ. ಆ ಮೂಲಕ ತಂಡದ ಗೆಲುವಾಗಿ ಪ್ರಯತ್ನಿಸುತ್ತಿದ್ದಾರೆ” ಎಂದು 3ನೇ ಪಂದ್ಯದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.