ದೇವನಹಳ್ಳಿ : ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಇಂದು ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಕೆಂಪೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ 8 ಎಕರೆ ಜಮೀನು ಬೇಕಿದ್ದು, ಇದನ್ನು ಭೂಸ್ವಾಧೀನ ಮಾಡುವ ಕೆಲಸ ಪ್ರಾರಂಭಿಸಲಾಗುವುದು. ರೈತರಿಗೂ ಸಹ ಅನುಕೂಲವಾಗುವಂತೆ ಸುಸಜ್ಜಿತವಾಗಿ ಕೆಂಪಾಪುರದ ಸರ್ವಂಗೀಣ ಅಭಿವೃದ್ಧಿ ಮಾಡಲಾಗುವುದು. ಕೆಂಪಾಪುರದಲ್ಲಿರುವ ಕೆರೆಯ ಅಭಿವೃದ್ಧಿಗೂ 12 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನೀಲನಕ್ಷೆ ಕೂಡ ಸಿದ್ಧಪಡಿಲಾಗಿದ್ದು, ಗ್ರಾಮಸ್ಥರು ಸಹಕಾರ ನೀಡಿದರೆ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.
108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ
ಗುಜರಾತ್ ನ ಸರ್ದಾರ್ ವಲ್ಲಾಬಾಯಿ ಪ್ರತಿಮೆಯ ರೀತಿಯಲ್ಲೇ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 108 ಅಡಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 23 ಎಕರೆಯ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣದ ಮೂರು ಟರ್ಮಿನಲ್ ಸೇರುವ ಸ್ಥಳದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಜೂನ್ 27ರಂದು ಕೆಂಪೇಗೌಡರ ಜಯಂತಿ ದಿನದಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.








