ಕಟ್ರ್ಲಿ ಆಂಬ್ರೋಸ್.. ವೆಸ್ಟ್ ಇಂಂಡಿಸ್‍ನ ಘಾತಕ ವೇಗಿ. ವೇಗ, ಬೌನ್ಸರ್ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್‍ಗಳಿಗೆ ನಡುಕಹುಟ್ಟಿಸುವಂತ ಮಾರಕ ವೇಗಿ. ಆದ್ರೆ ಅಷ್ಟೇ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಮೈದಾನದಲ್ಲಿ ಸಿಟ್ಟು ಮಾಡಿಕೊಂಡಿರುವುದು ತುಂಬಾನೇ ಅಪರೂಪ. ಸಹ ಆಟಗಾರರ ಜೊತೆಗೆ ಎದುರಾಳಿ ತಂಡದ ಆಟಗಾರರಿಗೂ ಗೌರವ ಕೊಡುತ್ತಿದ್ದ ಕ್ರಿಕೆಟಿಗ. ಅದೇ ರೀತಿ ಆಂಬ್ರೋಸ್ ಕೂಡ ಎದುರಾಳಿ ಆಟಗಾರರಿಂದ ನಿರೀಕ್ಷೆ ಮಾಡುತ್ತಿದ್ದರು. ಒಂದು ವೇಳೆ ಎದುರಾಳಿ ಆಟಗಾರ ಗೌರವ ನೀಡದೇ ಇದ್ದಾಗ ಆಂಬ್ರೋಸ್ ಕೂಡ ವಿರಾಟ ರೂಪ ತೋರಿಸುತ್ತಿದ್ದರು.
ಹೌದು. ಆಂಬ್ರೋಸ್ ಕ್ರಿಕೆಟ್ ಬದುಕಿನಲ್ಲಿ ಅಂತಹುದ್ದೊಂದು ಘಟನೆ ನಡೆದಿತ್ತು. ಪಾಪ ಆಂಬ್ರೋಸ್ ಆ ಘಟನೆಯನ್ನು ಇನ್ನೂ ಮರೆತಿಲ್ಲ. ಮರೆಯೋಕೆ ಆಗುತ್ತನೂ ಇಲ್ಲ. ಇದೀಗ 25 ವರ್ಷಗಳ ಹಿಂದಿನ ಘಟನೆಯೊಂದನ್ನು ಅಂಬ್ರೋಸ್ ಅವರು ನೆನಪಿಸಿಕೊಂಡಿದ್ದಾರೆ. ಅದು 1995ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮ್ಯಾಚ್. ಟ್ರಿನಿಡಾಡ್ ನಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ನಡುವೆ ನಡೆದ ಮಾತಿನ ಚಕಮಕಿಯ ಬಗ್ಗೆ ಆಂಬ್ರೋಸ್ ಹೇಳುವುದು ಹೀಗೆ… ಸ್ಟೀವ್ ವಾ ಮತ್ತು ನನ್ನ ನಡುವೆ ಸಾಕಷ್ಟು ವರ್ಷಗಳಿಂದ ಜಟಾಪಟಿ ನಡೆಯುತ್ತಿತ್ತು. ಸ್ಟೀವ್ ವಾ ತುಂಬಾ ಕಠಿಣ ಪ್ರತಿಸ್ಪರ್ಧಿ. ಆದ್ರೂ ವಾ ಬಗ್ಗೆ ನಾನು ತುಂಬಾನೇ ಗೌರವ ಇಟ್ಟುಕೊಂಡಿದ್ದೆ. ಆದ್ರೆ ಆ ಪಂದ್ಯದಲ್ಲಿ ಅವರು ನನಗೆ ಏನು ಹೇಳಿದ್ರು. ಅದು ನನಗೆ ಇಷ್ಟವಾಗಲಿಲ್ಲ ಎಂದ್ರು.
ಆರಂಭದಲ್ಲಿ ನಾನು ಕ್ಯಾರ್ ಮಾಡುತ್ತಿರಲಿಲ್ಲ. ಆದ್ರೆ ಸ್ಟೀವ್ ವಾ ಪದೇ ಪದೇ ಏನೇನೋ ಹೇಳ್ತಾ ಇದ್ರು. ಇದು ನನಗೆ ಕಿರಿಕಿರಿಯನ್ನುಂಟು ಮಾಡಿತ್ತು. ಆಗ ನೀನು ನನಗೆ ಏನಾದ್ರೂ ಹೇಳ್ತಾ ಇದ್ದಿಯಾ ಅಂತ ಕೇಳಿದ್ದೆ. ಅದಕ್ಕೆ ಸ್ಟೀವ್ ವಾ ಹೌದು ಅಂತನೂ ಇಲ್ಲ. ಇಲ್ಲ ಅಂತನೂ ಇಲ್ಲ. ನಾನು ಏನು ಬೇಕಾದ್ರೂ ಮಾತನಾಡುತ್ತೇನೆ ನನ್ನಿಷ್ಟ ಅಂತ ಹೇಳಿದ್ರು. ಅಲ್ಲದೆ ಬಿರುಸಿನ ಮಾತಿನ ಚಕಮಕಿಯೂ ನಡೆಯಿತ್ತು. ಇದು ನನಗೆ ಸಿಟ್ಟುಗೊಳ್ಳುವಂತೆ ಮಾಡಿತ್ತು. ಯಾಕಂದ್ರೆ ಸ್ಟೀವ್ ವಾ ಬಗ್ಗೆ ನಾನು ಅಪಾರವಾದ ಗೌರವವನ್ನಿಟ್ಟುಕೊಂಡಿದ್ದೆ. ಕುಪಿತಗೊಂಡ ನಾನು ನನ್ನ ಕ್ರಿಕೆಟ್ ಬದುಕು ಈ ಕ್ಷಣ ಬೇಕಾದ್ರೂ ಕೊನೆಗೊಳ್ಳಬಹುದು. ಅದ್ರಿಂದ ನನಗೆ ಯಾವ ವ್ಯತ್ಯಾಸನೂ ಆಗಲ್ಲ. ಆದ್ರೆ ನಾನು ಕೊಡುವ ಹೊಡೆತಕ್ಕೆ ನಿನ್ನ ಕ್ರಿಕೆಟ್ ಬದುಕು ಅಂತ್ಯವಾಗಬಹುದು. ಮತ್ತೆ ನೀನು ಯಾವತ್ತೂ ಕ್ರಿಕೆಟ್ ಆಡಬಾರದು. ಅಂತಹ ಹೊಡೆತ ನೀಡುತ್ತೇನೆ ಎಂದು ಏರು ಧ್ವನಿಯಲ್ಲೇ ಹೇಳಿದ್ದೆ ಅಂತ ಆಂಬ್ರೋಸ್ ಹೇಳಿದ್ದಾರೆ. ಆದಾದ ನಂತರ ನಾನು ಮತ್ತು ಸ್ಟೀವ್ ವಾ ಕೆಲವು ಬಾರಿ ಭೇಟಿಯಾಗಿದ್ದೇವು. ಆದ್ರೆ ಈ ಬಗ್ಗೆ ಇಬ್ಬರು ಏನನ್ನು ಮಾತನಾಡಿಲ್ಲ. ಇದು ನನಗೆ ಬೇಸರವಿದೆ. ಯಾಕಂದ್ರೆ ಅವರ ಬಗ್ಗೆ ಗೌರವವನ್ನಿಟ್ಟುಕೊಂಡಿದ್ದೆ ಎಂದು ಆಂಬ್ರೋಸ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.