ಬೆಂಗಳೂರು, ಮೇ 18: ರಾಷ್ಟ್ರವ್ಯಾಪಿ ಲಾಕ್ ಡೌನ್ ಮೇ 31 ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಷೇರು ಪೇಟೆ ತಲ್ಲಣಗೊಂಡಿದ್ದು, ಸೆನ್ಸೆಕ್ಸ್ 1,000 ಅಂಶ ಕುಸಿದಿದೆ. ಲಾಕ್ ಡೌನ್ ನಿಂದ ಉಂಟಾಗಿರುವ ಅರ್ಥಿಕ ಬಿಕ್ಕಟ್ಟಿಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ₹20 ಲಕ್ಷ ಕೋಟಿ ಪ್ಯಾಕೇಜ್ ಸಹ ಷೇರುಪೇಟೆಯ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,068.75 ಅಂಶ (ಶೇ 3.44) ಕಡಿಮೆಯಾಗಿ 30,028 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 50, ಶೇ 3.32ರಷ್ಟು ಇಳಿಕೆಯಾಗಿ 8,823 ಅಂಶ ಮುಟ್ಟಿದೆ.
30 ಕಂಪನಿಗಳ ಷೇರುಗಳಲ್ಲಿ 26 ಕಂಪನಿಗಳ ಷೇರುಗಳು ಸೆನ್ಸೆಕ್ಸ್ ನಲ್ಲಿ ನಕಾರಾತ್ಮಕ ವಹಿವಾಟು ಕಂಡಿವೆ. ಎಚ್.ಡಿ.ಎಫ್. ಸಿ, ಮಾರುತಿ ಸುಜುಕಿ, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ಸ್ ಷೇರುಗಳ ಮೌಲ್ಯ ಶೇ 5.5ರಿಂದ ಶೇ 7.5ರಷ್ಟು ಕುಸಿದರೆ, ಇಂಡಸ್ ಇಂಡ್ ಬ್ಯಾಂಕ್ ಷೇರು ಶೇ 9.63ರಷ್ಟು ನಷ್ಟ ಅನುಭವಿಸಿದೆ. ನಿಫ್ಟಿ ಮೀಡಿಯಾ, ನಿಫ್ಟಿ ಬ್ಯಾಂಕ್ ಶೇ 6.5ರಷ್ಟು ಕುಸಿತ ಕಂಡಿದೆ. ಸಿಪ್ಲಾ, ಟಿಸಿಎಸ್, ಭಾರ್ತಿ ಇನ್ಫ್ರಾಟೆಲ್ ಷೇರುಗಳು ಗಳಿಕೆ ದಾಖಲಿಸಿದರೆ, ಇಂಡಸ್ ಇಂಡ್ ಬ್ಯಾಂಕ್, ಜೀ ಎಂಟರ್ಟೈನ್ಮೆಂಟ್, ಐಷರ್ ಮೊಟಾರ್ಸ್ ಷೇರುಗಳು ಗರಿಷ್ಠ ನಷ್ಟ ಕಂಡಿವೆ.
ಬ್ಯಾಕಿಂಗ್ ಕ್ಷೇತ್ರದ ಷೇರುಗಳಾದ ಎಸ್.ಬಿ.ಐ, ಆ್ಯಕ್ಸಿಸ್ ಬ್ಯಾಂಕ್, ಎಚ್.ಡಿ.ಎಫ್.ಸಿ, ಬಜಾಜ್ ಪೈನ್ಯಾನ್ಸ್, ಐಸಿಐಸಿಐ, ಕೊಟಕ್, ಬಜಾಜ್ ಫಿನ್ಸರ್ವ್ ಇಂದಿನ ವ್ಯವಹಾರದಲ್ಲಿ ನಷ್ಟ ಅನುಭವಿಸಿದೆ.








