ಮೊದಲ ಟೆಸ್ಟ್ ಯಾರು ಗೆಲ್ತಾರೆ – ಇಂಗ್ಲೆಂಡ್ ಗೆಲುವು ಬ್ಯಾಟ್ಸ್ ಮೆನ್‍ಗಳ ಕೈಯಲ್ಲಿದೆ.. ಪಾಕ್ ಜಯ ಬೌಲರ್ ಗಳ ಕೈಚಳಕದಲ್ಲಿದೆ..!
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕವಾಗಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಪಂದ್ಯದ ಮೂರನೇ ದಿನ ಇಂಗ್ಲೆಂಡ್ ತಂಡ 106 ರನ್‍ಗಳ ಹಿನ್ನಡೆ ಅನುಭವಿಸಿತ್ತು. ಆದ್ರೆ ಇಂಗ್ಲೆಂಡ್ ಬೌಲರ್‍ಗಳು ಪಾಕಿಸ್ತಾನ ತಂಡಕ್ಕೆ ಎರಡನೇ ಇನಿಂಗ್ಸ್ ನಲ್ಲಿ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪಂದ್ಯವನ್ನು ಇಂಗ್ಲೆಂಡ್ ತಂಡದ ಹಿಡಿತದಲ್ಲಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ಪಾಕ್ ತಂಡದ 326 ರನ್‍ಗಳಿಗೆ ಪ್ರತಿಯಾಗಿ ಇಂಗ್ಲೆಂಡ್ 219 ರನ್ ಗಳಿಸಿ ಇನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಪಾಕ್ ಪರ ಯಾಸೀರ್ ಶಾಹ ಅವರು ನಾಲ್ಕು ವಿಕೆಟ್ ಉರುಳಿಸಿದ್ರು. ಮಹಮ್ಮದ ಅಬ್ಬಾಸ್ ಮತ್ತು ಶಾದಾಬ್ ಖಾನ್ ತಲಾ ಎರಡು ವಿಕೆಟ್ ಪಡೆದ್ರು. ಆದ್ರೆ ಎರಡನೇ ಇನಿಂಗ್ಸ್ ನಲ್ಲಿ ಪಾಕ್ ಬ್ಯಾಟ್ಸ್ ಮೆನ್‍ಗಳನ್ನು ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲು ಇಂಗ್ಲೀಷ್ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ. ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಅವರ ಮಾರಕ ದಾಳಿಗೆ ಪಾಕ್ ಬ್ಯಾಟ್ ಮೆನ್‍ಗಳು ತತ್ತರಿಸಿ ಹೋದ್ರು. ಪರಿಣಾಮ ಪಾಕಿಸ್ತಾನ ಮೂರನೇ ದಿನದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ ನಲ್ಲಿ 137 ರನ್‍ಗಳಿಗೆ 8 ವಿಕೆಟ್ ಗಳನ್ನು ಕಳೆದುಕೊಂಡಿದೆ.
ಈ ಮೂಲಕ ಪಾಕಿಸ್ತಾನ ತಂಡ 244 ರನ್‍ಗಳ ಮುನ್ನಡೆಯನ್ನು ಪಡೆದುಕೊಂಡಿದೆ. ದಿನದ ಅಂತ್ಯಕ್ಕೆ ಯಾಸೀರ್ ಶಾ ಅಜೇಯ 12 ಮತ್ತು ಮಹಮ್ಮದ್ ಅಬ್ಬಾಸ್ ಖಾತೆ ತೆರೆಯದೇ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಪರ ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಎರಡು ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಒಲಿವ್ ಪೊಪ್ 62 ರನ್ ಸಿಡಿಸಿದ್ರೆ, ಜೋಸ್ ಬಟ್ಲರ್ 38 ರನ್ ಗಳಿಸಿದ್ರು.
ಒಟ್ಟಾರೆ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸ್ಪಷ್ಟವಾಗಿ ಫಲಿತಾಂಶ ಹೊರಬೀಳುವುದು ಖಚಿತವಾಗಿದೆ. ಅಂತಿಮ ಎರಡು ದಿನದ ಆಟದಲ್ಲಿ ಗೆಲುವು ಯಾರ ಪಾಲಾಗುತ್ತೆ ಅಂತ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಂಗ್ಲೆಂಡ್ ಗೆಲುವು ಬ್ಯಾಟ್ಸ್ ಮೆನ್‍ಗಳ ಕೈಯಲ್ಲಿದ್ರೆ, ಪಾಕಿಸ್ತಾನದ ಗೆಲುವು ಬೌಲರ್‍ಗಳ ಕೈಯಯಲ್ಲಿದೆ.








