ಕಳ್ಳತನ ಮಾಡುವವರು , ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಹಿಂದೆ ಯಾವುದೋ ಒಂದು ಅನಿವಾರ್ಯತೆಯ ಕಥೆ ಇದ್ದೇ ಇರುತ್ತೆ ಎನ್ನಲಾಗುತ್ತೆ.. ಆದ್ರೆ ಅಪರಾಧ ಅಪರಾಧವೆ.. ಸಣ್ಣದಾದ್ರೂ ದೊಡ್ಡದಾದ್ರೂ , ಎಷ್ಟೇ ಅನಿವಾರ್ಯತೆ ಇದ್ರೂ..
ಆದ್ರೆ ಕಳ್ಳರಲ್ಲೂ ಮಾನವೀಯತೆ ಇದೆ ಎಂಬುದಕ್ಕೆ ಈ ಕಳ್ಳರ ಕ್ಷಮಾಣೆಯೇ ಸಾಕ್ಷಿ.. ಕಳ್ಳರು ತಾವು ಕದ್ದಿದ್ದ ವಸ್ತುಗಳನ್ನು ವಾಪಸ್ ಮಾಡಿ ಜೊತೆಗೆ ಕ್ಷಮಾಪಣೆಯ ಪತ್ರವನ್ನು ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ನಡೆದಿದೆ.
ಚಂದ್ರಾಯಕ್ ಗ್ರಾಮದ ನಿವಾಸಿ ದಿನೇಶ್ ತಿವಾರಿ ಬಂದಾದ ಗ್ರಾಮವೊಂದ್ರಲ್ಲಿ ವೆಲ್ಡಿಂಗ್ ಶಾಪ್ ಆರಂಭಿಸಲು ಸಿದ್ಧತೆ ನಡೆಸಿದ್ದರು. ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿದ್ದರು. ಆದ್ರೆ ಅಂಗಡಿಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ವೆಲ್ಡಿಂಗ್ ಯಂತ್ರ, ಕಟ್ಟರ್ ಹೀಗೆ ಹಲವು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಆದ್ರೆ ಆ ಕಳ್ಳರಿಗೆ ಆ ಅಂಗಡಿಯವ ಎಷ್ಟು ಕಷ್ಟಪಡುತ್ತಿದ್ದಾನೆ.. ಸಾಲದಿಂದ ಇದನ್ನೆಲ್ಲಾ ಖರೀದಿ ಮಾಡಿದ್ದಾರೆ , ಬಡವ ಎಂಬ ವಿಚಾರ ಗೊತ್ತಾಗ್ತಿದ್ದಂತೆ ಕದ್ದ ವಸ್ತುಗಳನ್ನ ವಾಪಸ್ ಇಟ್ಟಿದ್ದೂ ಅಲ್ದೇ ಕ್ಷಮಾಪಣಾ ಪತ್ರವನ್ನ ಇಟ್ಟು ಹೋಗಿದ್ದಾರೆ..
ನಿಮ್ಮ ಅಂಗಡಿಯ ಬಗ್ಗೆ ನಮಗೆ ತಪ್ಪಾಗಿ ಮಾಹಿತಿ ನೀಡಲಾಗಿತ್ತು. ಮಾಲೀಕರು ಶ್ರೀಮಂತರಾಗಿದ್ದು, ಅಲ್ಲಿ ನಮಗೆ ಹಲವು ಬೆಲೆಬಾಳುವ ವಸ್ತುಗಳು ಸಿಗುತ್ತವೆ ಎಂದುಕೊಂಡು ನಿಮ್ಮ ಅಂಗಡಿಗೆ ನುಗ್ಗಿದ್ದೆವು, ಕ್ಷಮಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅಂಗಡಿಯಲ್ಲಿ ವಸ್ತುಗಳು ಕಳುವಾದ ನಂತರ ಜಿಲ್ಲೆಯ ಚಂದ್ರಾಯಕ್ ಗ್ರಾಮದ ನಿವಾಸಿ ತಿವಾರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಳುವಾಗಿದ್ದ ವಸ್ತುಗಳಿಗಾಗಿ ಹುಡುಕಾಟವನ್ನು ಪೊಲೀಸರು ಪ್ರಾರಂಭಿಸಿದ್ದರು. ಈ ಘಟನೆ ನಡೆದು 3 ದಿನದ ನಂತರ ಗ್ರಾಮದ ನಿವಾಸಿಯೊಬ್ಬರು ಸಮೀಪದ ಹೊಲಗಳಲ್ಲಿ, ವೆಲ್ಡಿಂಗ್ ಯಂತ್ರಗಳು ಬಿದ್ದಿವೆ ಎಂದು ತಿಳಿಸಿದ್ದಾರೆ.
ತಿವಾರಿ ಹೊಲಕ್ಕೆ ಹೋಗಿ ನೋಡಿದಾಗ ಅವರ ಅಂಗಡಿಯಲ್ಲಿ ಕದ್ದಿದ್ದೆಲ್ಲ ವಸ್ತುಗಳು ಅಲ್ಲಿ ಇದ್ದವು. ಅಲ್ಲೇ ಒಂದು ಪತ್ರ ಕೂಡ ಇತ್ತು.