ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿಕೊಂಡಿದೆ. ಈವರೆಗೂ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಈಗಾಗಲೇ ಐದು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಇಂದು ದೆಹಲಿಯ ಮೌಜ್ಪುರ ಮತ್ತು ಬ್ರಹ್ಮಪುರಿಯಿಂದ ಕಲ್ಲು ತೂರಾಟ ನಡೆದ ಹೊಸ ಘಟನೆಗಳು ನಡೆದಿರುವುದು ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಗ್ರಹಿಸಲು ಗೃಹ ಸಚಿವ ಅಮಿತ್ ಶಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಹಿಂಸಾಚಾರವನ್ನು ದೂರವಿಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಹಾಗೇ ಪರಿಸ್ಥಿತಿಯನ್ನು ಪರಿಶೀಲಿಸಲು ತುರ್ತುಸಭೆ ಕರೆದಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ನಡೆದು ಈಶಾನ್ಯ ದೆಹಲಿಯಲ್ಲಿ ಘರ್ಷಣೆ ಉಂಟಾಗಿ ನಿನ್ನೆ ಪೆÇಲೀಸರು ಸೇರಿ ಐದು ಜನರು ಸಾವನ್ನಪ್ಪಿದದ್ದಾರೆ. ಹಾಗೇ ಘಟನೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು, ಪರಿಸ್ಥಿತಿಯನ್ನು ನಿಯಂತ್ರಿಸಲು ಅರೆಸೈನಿಕರನ್ನು ಪ್ರತಿಭಟನೆಯ ಸ್ಥಳದಲ್ಲಿ ನಿಯೋಜಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿರುವುದು ಪೊಲೀಸರ ತಲೆಬಿಸಿ ಮಾಡಿದೆ.
ಇತ್ತ, ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಅವರ ಆಗಮನದ ನಿನ್ನೆಯ ದಿನ ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿರುವುದು ದೇಶದ ಜನತೆಗೆ ಬೇಸರವನ್ನುಂಟು ಮಾಡಿದೆ.








