ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವೀಗ ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ದರ ಏರಿಕೆಯ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ವಿನೂತನ ಮಾದರಿಯಲ್ಲಿ ಸಮರ ಸಾರಿದ್ದಾರೆ. Mr CM, Cut the Drama (ಮುಖ್ಯಮಂತ್ರಿಗಳೇ, ನಾಟಕ ನಿಲ್ಲಿಸಿ) ಎಂಬ ಟೀ-ಶರ್ಟ್ ಧರಿಸಿ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಸಂಸದರು, ಪ್ರಯಾಣಿಕರ ಅಹವಾಲು ಆಲಿಸುವುದರ ಜೊತೆಗೆ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪ್ರಯಾಣಿಕರ ಗೋಳು
ಆರ್.ವಿ. ರಸ್ತೆ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿ ಅವರ ಸಮಸ್ಯೆಗಳನ್ನು ಆಲಿಸಿದ ತೇಜಸ್ವಿ ಸೂರ್ಯ ಅವರಿಗೆ ಜನಸಾಮಾನ್ಯರ ಆಕ್ರೋಶದ ಬಿಸಿ ತಟ್ಟಿತು. ಈ ವೇಳೆ ಯುವತಿಯೊಬ್ಬರು ತಮ್ಮ ದೈನಂದಿನ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸರ್, ನಾವು ಬದುಕುವುದೇ ಕಷ್ಟವಾಗಿದೆ. ಮನೆಯಿಂದ ಇಲ್ಲಿಗೆ ಬರಲು ಬಸ್ ನಲ್ಲಿ ಸಿಕ್ಕಾಪಟ್ಟೆ ರಶ್ ಇರುತ್ತದೆ. ಆಟೋ ಹಿಡಿದರೆ ಕನಿಷ್ಠ 50 ರೂಪಾಯಿ ಕೊಡಬೇಕು. ಮೆಟ್ರೋಗೆ ದಿನಕ್ಕೆ 200 ರೂಪಾಯಿ ದಾಟುತ್ತಿದೆ. ಕೇವಲ ಪ್ರಯಾಣಕ್ಕಾಗಿಯೇ ದಿನಕ್ಕೆ 250 ರೂಪಾಯಿ ಖರ್ಚು ಮಾಡಿದರೆ, ಉಳಿದ ಅಗತ್ಯಗಳಿಗೆ ಹಣ ಹೊಂದಿಸುವುದು ಹೇಗೆ ಎಂದು ಪ್ರಶ್ನಿಸಿದರು. ಗಾರ್ಮೆಂಟ್ಸ್ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಈ ದರ ಏರಿಕೆ ಮರಣಶಾಸನವಾಗಲಿದೆ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ಹೊರಹಾಕಿದರು.
ಟೀ ಶರ್ಟ್ ಮೇಲಿತ್ತು ಸ್ಫೋಟಕ ಸತ್ಯ!
ಸಂಸದರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಕೇವಲ ಪ್ರತಿಭಟನೆಯ ಸಂಕೇತವಾಗಿರಲಿಲ್ಲ, ಬದಲಿಗೆ ಅದರಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ದಾಖಲೆಗಳಿದ್ದವು. ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ರಾಜ್ಯ ಸರ್ಕಾರದ ಅಧಿಕಾರಿಗಳು ಲಿಖಿತವಾಗಿ ನೀಡಿರುವ ಹೇಳಿಕೆಗಳನ್ನು ಟೀ ಶರ್ಟ್ ಮೇಲೆ ಮುದ್ರಿಸಲಾಗಿತ್ತು. ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ, ನಿರ್ವಹಣೆಗೆ ನಮ್ಮ ಬಳಿ ಹಣವಿಲ್ಲ, ಆದ್ದರಿಂದ ದಯವಿಟ್ಟು ದರ ಏರಿಕೆ ಮಾಡಿ ಎಂದು ಅಧಿಕಾರಿಗಳ ಮೂಲಕ ಸರ್ಕಾರವೇ ಸಮಿತಿಗೆ ಮನವಿ ಮಾಡಿದೆ ಎಂದು ಸೂರ್ಯ ಆರೋಪಿಸಿದರು. ಉಪಮುಖ್ಯಮಂತ್ರಿಗಳು ಆಗಾಗ ಖಾಲಿ ಟ್ರಂಕ್ ಎಂದು ಕೇಂದ್ರದತ್ತ ಬೊಟ್ಟು ಮಾಡುತ್ತಾರೆ, ಆದರೆ ನಿಜವಾಗಿಯೂ ಖಾಲಿ ಟ್ರಂಕ್ ಯಾರದ್ದು ಎಂಬುದು ಈಗ ಜಗಜ್ಜಾಹೀರಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರ ಮಧ್ಯಪ್ರವೇಶ ಮತ್ತು ಎಚ್ಚರಿಕೆ
ಮೆಟ್ರೋ ದರ ಏರಿಕೆ ತಡೆಗೆ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಸಂಸದರು ಸ್ಪಷ್ಟಪಡಿಸಿದರು. ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ತಾವು ಚರ್ಚಿಸಿದ್ದು, ಸಚಿವರು ಮೆಟ್ರೋ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು. ದರ ನಿರ್ಣಯ ಸಮಿತಿಯನ್ನು ಮರು ರಚನೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.
ಆದಾಗ್ಯೂ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಟಕ್ಕೆ ಬಿದ್ದು ದರ ಏರಿಕೆ ಜಾರಿಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ. ಒಂದು ವೇಳೆ ಜನವಿರೋಧಿ ದರ ಏರಿಕೆ ಜಾರಿಯಾದರೆ, ಸೋಮವಾರ ಬೆಂಗಳೂರಿನ ಪ್ರತಿಯೊಂದು ಮೆಟ್ರೋ ನಿಲ್ದಾಣದ ಮುಂಭಾಗ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ನಾವು ಸುಮ್ಮನೆ ಕೂರುವುದಿಲ್ಲ, ದರ ಏರಿಕೆ ಬೇಡ ಎಂಬುದು ನಮ್ಮ ಮತ್ತು ಜನರ ಒಕ್ಕೊರಲ ಒತ್ತಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.








