ಬಾಗಲಕೋಟೆ : ರಾಜ್ಯದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ವ್ಯಾಪಕ ಮಳೆಯಾಗುತ್ತಿದ್ದು, ಬಾಗಲಕೋಟೆಯಲ್ಲಿ ವರುಣ ಅಬ್ಬರಿಸಿಬೊಬ್ಬಿರಿದಿದ್ದಾನೆ. ನಿನ್ನೆ ಜಿಲ್ಲೆಯಲ್ಲಿ ಭಾರಿ ವರ್ಷಧಾರೆ ಆಗಿದ್ದು, ಭಾರಿ ಗಾಳಿಗೆ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು, ಬೃಹತ್ ಮರಗಳು ನೆಲಕ್ಕುರಿಳಿವೆ.
ಬಾದಾಮಿ ತಾಲೂಕಿನ ಕಬ್ಬಲಗಿ ಗ್ರಾಮದಲ್ಲಿ ವರುಣ ನಾನಾ ಅವಾಂತರಗಳನ್ನು ಸೃಷ್ಟಿಸಿದ್ದು,ಹನುಮಂತ ಮೂಲಿಮನಿ ಎಂಬುವರು ತಮ್ಮ 12 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶವಾಗಿದೆ. ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದು, ರಸ್ತೆಬದಿಯಿದ್ದ ವಿದ್ಯುತ್ ಕಂಬಗಳೂ ರಸ್ತೆಗಡ್ಡಲಾಗಿ ಬಿದ್ದಿವೆ. ಇದರಿಂದ ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದ್ದು, ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಇದಿಷ್ಟೆ ಅಲ್ಲದೇ ಬಾಗಲಕೋಟೆಯ ನವನಗರ, ವಿದ್ಯಾಗಿರಿ, ಹಳೆಯ ಬಾಗಲಕೋಟೆ ಹಾಗೂ ತಾಲೂಕಿನ ಹಲವೆಡೆ ಸಂಜೆ ಜೋರು ಮಳೆ ಆಗಿದೆ. ಗುಡುಗು ಸಿಡಲಿನ ಆರ್ಭಟದೊಂದಿಗೆ ಸುರಿದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ನೆಲ ಮುಗಿಲನ್ನು ಒಟ್ಟುಗೂಡಿಸಿತ್ತು. ಮುಂಗಾರು ಹಂಗಾಮಿನ ಮೊದಲ ದಿನ ಸುರಿದ ಮಳೆಗೆ ಹೆಸರು ಬಿತ್ತನೆ ಮಾಡಿದವರಿಗೆ ಅನುಕೂಲವಾಗಲಿದೆ. ಜೊತೆಗೆ ಬಿತ್ತನೆಗೆ ನೆಲ ಹದ ಮಾಡಿಕೊಂಡ ರೈತಾಪಿ ವರ್ಗಕ್ಕೂ ನೆರವಾಗಲಿದೆ.








