ನಿರಾಸೆ… ಸಿಟ್ಟು.. ಆಕ್ರೋಶದಿಂದ ಕುದಿಯುತ್ತಿರುವ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ಸ್ಟುವರ್ಟ್ ಬ್ರಾಡ್… ನೆನಪು ಇರಲೇಬೇಕು. ಇಂಗ್ಲೆಂಡ್ನ ಅಪ್ರತಿಮ ವೇಗಿ. ಅದಕ್ಕಿಂತ ಹೆಚ್ಚಾಗಿ ಯುವರಾಜ್ ಸಿಂಗ್ ಅವರ ಆರು ಸಿಕ್ಸರ್ಗಳು ನೆನಪು ಮಾಡಿಕೊಂಡಾಗ ಸ್ಟುವರ್ಟ್ ಬ್ರಾಡ್ ನೆನಪು ಆಗಲೇಬೇಕು. ಫ್ಲಿಂಟಾಫ್ ಮಾಡಿರುವ ಕಿತಾಪತಿಯಿಂದ ರೊಚ್ಚಿಗೆದ್ದ ಯುವಿ ಸ್ಟುವರ್ಟ್ ಬ್ರಾಡ್ ಅವರನ್ನು ದಂಡಿಸಿದ್ದರು. ಆಗ ಸ್ಟುವರ್ಟ್ ಬ್ರಾಡ್ ಅವರ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಬ್ರಾಡ್ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು. ನೋಡ ನೋಡುತ್ತಲೇ ಇಂಗ್ಲೆಂಡ್ನ ಟ್ರಂಪ್ ಕಾರ್ಡ್ ಬೌಲರ್ ಆಗಿ ರೂಪುಗೊಂಡರು. ಅಷ್ಟೇ ಅಲ್ಲ, ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಎರಡನೇ ವೇಗಿಯಾಗಿಯೂ ಹೊರಹೊಮ್ಮಿದ್ರು.
ಇಂತಹ ವೇಗಿಯನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಕೈಬಿಡಲಾಗಿದೆ. ಈ ಕಾರಣಕ್ಕಾಗಿ ಸ್ಟುವರ್ಟ್ ಬ್ರಾಡ್ ಸಿಟ್ಟುಗೊಂಡಿದ್ದಾರೆ. ನಿರಾಸೆಗೊಂಡಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರದಿಂದ ರೋಸಿ ಹೋಗಿದ್ದಾರೆ. ತಂಡದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಪಂದ್ಯದ ಹಿಂದಿನ ರಾತ್ರಿ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ನನ್ನನ್ನು ಆಡುವ 11ರ ಬಳಗದಿಂದ ಹೊರಗಿಡುವ ಬಗ್ಗೆ ಹೇಳಿದ್ದರು. ಆಗ ನನಗೆ ಸಿಟ್ಟು ಬಂದಿತ್ತು. ನಿರಾಸೆಯಾಯ್ತು. ಇಂತಹ ನಿರ್ಧಾರ ತೆಗೆದುಕೊಂಡಾಗ ಅರಗಿಸಿಕೊಳ್ಳುವುದು ಕಷ್ಟ ಅಂತ ನನಗೆ ಗೊತ್ತಿದೆ. ಆದ್ರೆ ನಾನು ಇಂಗ್ಲೆಂಡ್ ಪರ ಅದ್ಭುತವಾದ ಪ್ರದರ್ಶನವನ್ನೂ ನೀಡಿದ್ದೆ. ಕಳೆದ ಆಶಷ್ ಸರಣಿಯಲ್ಲೂ ಶ್ರೇಷ್ಠ ನಿರ್ವಹಣೆಯನ್ನು ನೀಡಿದ್ದೆ, ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದೆ ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.
ನನಗೆ ಸ್ಪಷ್ಟಿಕರಣ ಬೇಕಿದೆ. ಭವಿಷ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ನಾನು ಆಡುತ್ತೇನೋ ಇಲ್ಲವೋ ಅಂತ. ಹಾಗೇ ಸ್ಯಾಮ್ ಕುರನ್ ಮತ್ತು ಕ್ರಿಸ್ ವೋಕ್ಸ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಹನ್ನೊಂದರ ಬಳಗದಲ್ಲಿರಲು ಅರ್ಹರಾಗಿದ್ದಾರೆ. ಆದ್ರೆ ನನ್ನನ್ನು ತಂಡದಿಂದ ಕೈಬಿಟ್ಟಿರುವುದು ನನಗೆ ಸಿಟ್ಟು ತಂದಿದೆ ಎಂದು ಬ್ರಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನಾನು ಯಾರಿಗೂ ನನ್ನ ಸಾಮಥ್ರ್ಯವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಇಂಗ್ಲೆಂಡ್ ತಂಡಕ್ಕೂ ನಾನು ಏನು ಎಂಬುದು ಗೊತ್ತು. ನಾನೇನು ಮಾಡಿದ್ದೇನೆ ಎಂದು ಆಯ್ಕೆಗಾರರಿಗೂ ಗೊತ್ತಿದೆ. ಈ ಬಗ್ಗೆ ನಾನು ಎಡ್ ಸ್ಮಿತ್ ಜೊತೆ ಮಾತನಾಡಿದ್ದೇನೆ. ಅವರು ಈ ಪಂದ್ಯಕ್ಕೆ ಕೈಬಿಡಲಾಗಿದೆ. ಪಿಚ್ಗೆ ಅನುಸಾರವಾಗಿ ನಾವು 11ರ ಬಳಗವನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹಾಗಂತ ನಾನೇನು ಭಾವನಾತ್ಮಕ ವ್ಯಕ್ತಿಯಲ್ಲ. ಕಳೆದ ಕೆಲವು ದಿನಗಳಲ್ಲಿಂದ ನಾನು ಸಿಟ್ಟು, ನಿರಾಸೆಯಿಂದ ರೋಸಿ ಹೋಗಿದ್ದೇನೆ ಎಂದು ಬ್ರಾಡ್ ಹೇಳಿದ್ದಾರೆ.
ಅಂದ ಹಾಗೇ, ಸ್ಟುವರ್ಟ್ ಬ್ರಾಡ್ ಕಳೆದ ಎಂಟು ವರ್ಷಗಳಿಂದ ಇಂಗ್ಲೆಂಡ್ ತಂಡದ ಪರ ಸತತವಾಗಿ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. 2012ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಅವರನ್ನು ಮೊದಲ ಬಾರಿ ತಂಡದಿಂದ ಕೈಬಿಡಲಾಗಿದೆ. ಸ್ಟುವರ್ಟ್ ಬ್ರಾಡ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 485 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.