ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅನಿಸಿಕೆಗಳು
ಬೆಂಗಳೂರು, ಜುಲೈ 15: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ಮಹೋನ್ನತ ಘಟ್ಟಗಳು. ಈ ಬಾರಿ ಕೊರೊನಾ ಸೋಂಕಿನ ಬಿಕ್ಕಟ್ಟಿನ ನಡುವೆ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಾಟಿಯಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿರುವುದು ಶ್ಲಾಘನೀಯ. ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಧೈರ್ಯಗುಂದದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪಿಯುಸಿ ಪರೀಕ್ಷೆಯ ಮಹತ್ವವನ್ನು ಅರಿತ ಇಲಾಖೆ ಅಂಗ್ಲ ಭಾಷೆ ವಿಷಯದ ಪರೀಕ್ಷೆಯನ್ನು ನಡೆಸಿದ ರೀತಿ, ಪರೀಕ್ಷೆಗೆ ಹಾಜರಾದ ಮಕ್ಕಳ ಮತ್ತು ಹೆತ್ತವರ ಮನೋಧಾಡ್ಯಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು.
ಉಡುಪಿಯ ಅಭಿಜ್ಞಾ ರಾವ್ ಮತ್ತು ಬೆಂಗಳೂರಿನ ಪ್ರೇರಣಾ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಅರವಿಂದ ಶ್ರೀವತ್ಸ ಪ್ರಥಮ ಸ್ಥಾನ ಪಡೆದಿದ್ದಾರೆ. ಬಳ್ಳಾರಿಯ ಕರೇಗೌಡ ದಾಸನ್ ಗೌಡರ್ ಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ವರ್ಷಪೂರ್ತಿ ಕಠಿಣ ಪರಿಶ್ರಮ, ನಿತ್ಯದ ಅಭ್ಯಾಸದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಈ ವಿದ್ಯಾರ್ಥಿಗಳು ತಮ್ಮ ಸಂತೋಷವನ್ನು ಈ ರೀತಿ ಹಂಚಿಕೊಂಡಿದ್ದಾರೆ.
ಅಭಿಜ್ಞಾ ರಾವ್: ಉಡುಪಿಯ ವಿದ್ಯೋದಯ ಪಿಯು ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ ರಾವ್, ಎಸ್.ಎಸ್.ಎಲ್.ಸಿಯಲ್ಲಿ ದ್ವಿತೀಯ ಸ್ಥಾನ ಪಡೆದಾಗ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಲೇ ಬೇಕು ಎಂಬ ಛಲ ಹುಟ್ಟಿತು. ಅದುವೇ ಇಂದಿನ ಸಾಧನೆಗೆ ಕಾರಣವಾಗಿದೆ. ಅಂದಿನ ಪಾಠವನ್ನು ಆಯಾಯ ದಿನವೇ ಅಭ್ಯಾಸ ಮಾಡುತ್ತಿದ್ದ ಕಾರಣ ಒತ್ತಡಕ್ಕೆ ಒಳಗಾಗುವ ಪ್ರಮೇಯ ಬರಲಿಲ್ಲ. ಹೆತ್ತವರ ಮತ್ತು ಅಧ್ಯಾಪಕರ ಸಹಕಾರ ನಾನು ಪ್ರಥಮ ಸ್ಥಾನ ಪಡೆಯಲು ಕಾರಣವಾಯಿತು ಎಂದು ಹೇಳಿದ್ದಾರೆ.
ಪ್ರೇರಣಾ : ಬೆಂಗಳೂರಿನ ವಿದ್ಯಾಮಂದಿರ ಕಾಲೇಜು ವಿದ್ಯಾರ್ಥಿನಿ ಪ್ರೇರಣಾ ಅವರು ಕೋಚಿಂಗ್ ಪಡೆಯದೇ ಪ್ರತಿನಿತ್ಯ 5-6 ಗಂಟೆ ಓದುತ್ತಿದ್ದೆ. ಇದೇ ನನಗೆ ಪ್ರಥಮ ಸ್ಥಾನ ಪಡೆಯಲು ಕಾರಣವಾಯಿತು. ಜೊತೆಗೆ ಹೆತ್ತವರ ಪ್ರೋತ್ಸಾಹ ಉಪನ್ಯಾಸಕರ ಸಹಕಾರ ಈ ನನ್ನ ಯಶಸ್ವಿಗೆ ಕಾರಣ ಎಂದು ಹೇಳಿದ್ದಾರೆ.
ಅರವಿಂದ ಶ್ರೀವತ್ಸ: ಪ್ರಥಮ ಸ್ಥಾನ ಪಡೆಯಲೇಬೇಕು ಎಂದು ನಾನು ಓದಲಿಲ್ಲ. ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ, ಓದಿನ ಜೊತೆಗೆ ಸಂಗೀತದ ಹವ್ಯಾಸ ನನ್ನ ದಿನಚರಿಯಾಗಿತ್ತು ಎಂದು ಬೆಂಗಳೂರಿನ ವಿದ್ಯಾಮಂದಿರ ಕಾಲೇಜು ವಿದ್ಯಾರ್ಥಿ ಅರವಿಂದ ಶ್ರೀವತ್ಸ ಅವರು ಹೇಳಿದ್ದಾರೆ.
ಕರೇಗೌಡ ದಾಸನ್ ಗೌಡರ್ : ಪೋಷಕರ ಸಹಕಾರ, ಉಪನ್ಯಾಸಕರ ಮಾರ್ಗದರ್ಶನ ನನ್ನ ಈ ಸಾಧನೆಗೆ ಕಾರಣ ಎಂದಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ವಿದ್ಯಾರ್ಥಿ ಕರೇಗೌಡ ನನ್ನ ಸಾಧನೆ ಸಂತೋಷ ಮತ್ತು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.