ವಿದ್ಯಾರ್ಥಿಗಳ ಪ್ರತಿಭಟನೆ : ಪೊಲೀಸರಿಂದ ಲಾಠಿ ಚಾರ್ಜ್
ಬೆಂಗಳೂರು : ಕಾಲೇಜು ಖಾಸಗೀಕರಣಗೊಳಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ವಿಧಾನಸೌಧ ಚಲೋ ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಾಠಿ ಬೀಸಿದ್ದಾರೆ.
ಹೊಸ ಶಿಕ್ಷಣ ನೀತಿಯಲ್ಲಿ ಆನ್ ಲೈನ್ ತರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದು ಅಂಗನವಾಡಿ ಶಿಕ್ಷಣಕ್ಕೆ ಪೂರ್ತಿ ಕಡಿವಾಣ ಹಾಕುವ ನಿರ್ಧಾರವಾಗಿದೆ.
ಹೀಗಾಗಿ ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ನಿರ್ಧಾರವನ್ನು ಕೈ ಬಿಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು, ಮಂಗಳೂರು, ಗುಲ್ಬರ್ಗಾ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸೆಂಟ್ ಮರ್ಥಾಸ್ ಆಸ್ಪತ್ರೆ ಬಳಿಯಿಂದ ಜಾಥಾ ಆರಂಭಿಸಿದರು.
ಈ ವೇಳೆ ವಿದ್ಯಾರ್ಥಿಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ್ರು. ಆಗ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು.
ಇದರಿಂದ ಮೈಸೂರು ಬ್ಯಾಂಕ್ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅಲ್ಲದೇ ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಲು ಮುಂದಾದ್ರು. ಆಗ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದರು.