ಮೈಸೂರು: ಇದೊಂದು ಕರಳು ಹಿಂಡುವ ಕತೆ. ಪೋಷಕರು ಎಷ್ಟೇ ಬಡವರಾಗಿರಲಿ. ತಮಗೆ ಏನೂ ಇಲ್ಲದಿದ್ದರೂ ಮಕ್ಕಳು ಹೊಟ್ಟೆ ತುಂಬ ಊಟ ಮಾಡಲಿ ಎಂದು ಬದುಕುತ್ತಿರುತ್ತಾರೆ. ಆದರೆ, ಹಲವರು ತಮಗೆ ಕೈಲಾಗದಿದ್ದಕ್ಕೆ ಮಕ್ಕಳನ್ನು ಹಾಸ್ಟೇಲ್ ಗೆ ಸೇರಿಸಿ, ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತಿರುತ್ತಾರೆ. ಆದರೆ, ಅಲ್ಲಿ ಸರಿಯಾಗಿ ಊಟ ನೀಡದಿದ್ದರೆ ಏನು ಮಾಡಬೇಕು? ಹಾಗೊಂದು ಘಟನೆ ಬೆಳಕಿಗೆ ಬಂದಿದೆ.
ಹೆಚ್.ಡಿ.ಕೋಟೆ (H.D Kote) ಪಟ್ಟಣದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ (Kasturba Gandhi hostel) ಸರಿಯಾಗಿ ಊಟ ನಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು (Students) ಪ್ರತಿಭಟನೆ ನಡೆಸಿದ್ದಾರೆ.
ಕಳೆದ 15 ದಿನಗಳಿಂದ ವಸತಿ ನಿಲಯದಲ್ಲಿ ಸರಿಯಾದ ಊಟ ನೀಡುತ್ತಿಲ್ಲ. ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಕೂಡ ಸರಿಯಾಗಿ ಸಿಗುತ್ತಿಲ್ಲ. 65 ವಿದ್ಯಾರ್ಥಿನಿಯರಿಗೆ 1 ಲೀಟರ್ ಹಾಲು ನೀಡಲಾಗುತ್ತಿದೆ. ವಿದ್ಯಾರ್ಥಿನಿಯರ ಊಟಕ್ಕೆ ಸೊಸೈಟಿ ಅಕ್ಕಿ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮೇಲ್ವಿಚಾರಕಿ ಕೂಡ ಆಹಾರ ಪದಾರ್ಥ ಪೂರೈಸುವ ಗುತ್ತಿಗೆದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಇದರಿಂದಾಗಿ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.