ಈ ದೇಶ ಕಂಡ ಅಪ್ರತಿಮ ಮಹಾ ದಂಡನಾಯಕ ನೇತಾಜಿ ಸುಭಾಷ್ ಬೋಸ್ ಜನ್ಮಜಯಂತಿ ನಿಜವಾದ ಪರಾಕ್ರಮ್ ದಿವಸವಲ್ಲದೇ ಇನ್ನೇನು! Marjala manthana Subhas Chandra Bose
ಇಂದು ದೇಶದ ಚರಿತ್ರೆ ಕಂಡ ಅಪ್ರತಿಮ ದೇಶಭಕ್ತ ಯೋಧನ ಜನ್ಮದಿನ. ಸ್ವರಾಜ್ಯ ಹಾಗೂ ಸ್ವಾತಂತ್ರ್ಯಕ್ಕಾಗಿ ಮಹಾಸಂಗ್ರಾಮ ಹುಟ್ಟುಹಾಕಿದ ಆ ಧೀಮಂತ ನಾಯಕ ಕೊನೆಗೂ ಅಸಂಖ್ಯ ಪ್ರಶ್ನೆಗಳನ್ನುಳಿಸಿ ಕಣ್ಮರೆಯಾದ. ಆದರೆ ಅವರ ನೆನಪು ಎಂದಿಗೂ ಅಜರಾಮರ. ಇಂದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕೋಲ್ಮಿಂಚು ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮಜಯಂತಿ. ಕೇಂದ್ರ ಸರ್ಕಾರ ಆ ಮಹಾ ದಂಡನಾಯಕನ ಸ್ಮರಣಾರ್ಥ ಈ ದಿನವನ್ನು ಪರಾಕ್ರಮ್ ದಿನವೆಂದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಒಂದ ಸಣ್ಣ ಟ್ರಿಬ್ಯೂಟ್ ಇದು. Marjala manthana Subhas Chandra Bose
ನೀವು ನನಗೆ ನಿಮ್ಮ ಬಿಸಿರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಅನ್ನುವ ಕೆಚ್ಚೆದೆಯ ಮಾತುಗಳನ್ನಾಡಿದ ನಿಜ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್. ಅದು ಭಾರತದ ಸ್ವಾತಂತ್ರ್ಯ ಚಳುವಳಿ ಕಾವೇರುತ್ತಿದ್ದ ಪರ್ವ ಕಾಲವೂ ಹೌದು; ಇನ್ನೊಂದೆಡೆ ಬಲಕಳೆದುಕೊಂಡಿದ್ದ ಸತ್ಯಾಗ್ರಹದ ನಿರ್ವೀಯತೆಯಿಂದ ದೇಶದ ಪ್ರತಿಭಟನೆ ಮೂಲೆಗುಂಪಾಗುತ್ತಿದ್ದ ಕಾಲಘಟ್ಟವೂ ಹೌದು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡಿ ಅನ್ನುತ್ತಿದ್ದ ಗಾಂಧಿ ವಾದದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಕಷ್ಟ ಎಂದು ಮನಗಂಡಿದ್ದ ವಿಶಿಷ್ಟ ಹೋರಾಟಗಾರ ಸುಭಾಷ್ ಬಾಬು. ಆಗ ಮೊಳೆತಿದ್ದೇ ಆಜಾದ್ ಹಿಂದ್ ಅನ್ನುವ ದೇಶಭಕ್ತರ ಸೈನ್ಯದ ಪರಿಕಲ್ಪನೆ.
ಕೋಲ್ಕಾತ್ತದ ನಿವಾಸದಲ್ಲಿ ಬಂಧಿಯಾಗಿದ್ದ ಸುಭಾಷ್ ಚಂದ್ರ ಬೋಸ್ ಮನಸಿನಲ್ಲಿದ್ದ ಅದಮ್ಯ ತುಡಿತ ಅಂದು ಯಾರಿಗೂ ಅರ್ಥವಾಗಿರಲಿಲ್ಲ. ಹೊರಗಿನ ಪ್ರಪಂಚ ಸುಭಾಷ್ ಬೋಸ್ ಸನ್ಯಾಸತ್ವ ಸ್ವೀಕರಿಸಿದ್ದಾರೆ ಅಂತಲೇ ಭಾವಿಸಿತ್ತು. ಆದರೆ ಬೋಸ್ ಮನೋವೇಗದಲ್ಲಿ ಆಫ್ಘಾನಿಸ್ತಾನದಲ್ಲಿ ನಿಂತು ಕಾಬೂಲ್ ನಲ್ಲಿದ್ದ ಜಪಾನ್ ಹಾಗೂ ರಷ್ಯಾ ಎಂಬೆಸಿಯನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದರು. ಅಲ್ಲಿಂದ ಶುರುವಾಗಿದ್ದು ಭಾರತದ ಚರಿತ್ರೆಯ ಮಹಾನ್ ದಂಡನಾಯಕನ ಅಸಲೀ ವಿಮೂಚನಾ ಸಂಘರ್ಷ.
ಪಾದರಸ ಕುಡಿದವರಂತೆ ಓಡಾಡಿದ ಸುಭಾಷ್ ಬೋಸ್ ಮಲಯ, ಸಿಂಗಾಪುರ, ಜಪಾನ್, ಜರ್ಮನಿ ಸುತ್ತಾಡಿದರು. ಎರಡನೇ ವಿಶ್ವಯುದ್ಧದಲ್ಲಿ ಇಂಗ್ಲೆಂಡ್ ಹಾಗೂ ಮಿತ್ರರಾಷ್ಟ್ರಗಳ ಪರ ಯುದ್ದಖೈದಿಗಳಾಗಿದ್ದ ಭಾರತೀಯ ಯೋಧರನ್ನು ಸಂಪರ್ಕಿಸಿದರು. ಅದೇ ಸೈನಿಕರನ್ನು ಬಳಸಿಕೊಂಡು ಹೊಸ ಸೈನ್ಯ ಕಟ್ಟಿದರು. ಹಾಗೆ ನಿರ್ಮಾಣವಾದ ಪರಿಪೂರ್ಣ ದೇಶಭಕ್ತಿಯ ಸೇನಾ ತುಕುಡಿಯೇ ಅಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ. ಜಪಾನ್ ಸಹಯೋಗದೊಂದಿಗೆ ಭಾರತದ ಮೇಲೆ ಯುದ್ಧ ಸಾರಿದ್ದ ಬೋಸ್ ಬರ್ಮಾ ದಾಟಿದ್ದರು, ಚಲೋ ದಿಲ್ಲಿ ಅಂದಿದ್ದರು. ಆದರೆ ಆಗ ವಿಶ್ವಯುದ್ದ ಸೋತ ಜಪಾನ್ ಕೈಚೆಲ್ಲಿದ್ದರಿಂದ ಐಎನ್ಎಗೆ ಹಿನ್ನಡೆ ಉಂಟಾಗಿತ್ತು. ಆದರೆ ಸುಭಾಷ್ ಪ್ರಯತ್ನ ಬಿಟ್ಟಿರಲಿಲ್ಲ. ನಿಜಾರ್ಥದಲ್ಲಿ ಬ್ರಿಟೀಶ್ ರಾಜ್ ಆಡಳಿತ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸುವ ಹಿಂದೆ ಇದ್ದಿದ್ದು ಸುಭಾಷ್ ಬಾಬುವಿನ ಭಯವೇ ವಿನಃ ಗಾಂಧಿಯ ಸತ್ಯಾಗ್ರಹವಲ್ಲ ಅನ್ನುವ ಮಾತುಗಳಿವೆ. ಇದಕ್ಕೊಂದು ತಾರ್ಕಿಕ ವಾದವನ್ನು ಮುಂದಿಡಲಾಗುತ್ತದೆ.
ನೇತಾಜಿ ಸುಭಾಷ್ ಬಾಬು ದೇಶ ತೊರೆದ ನಂತರ ಅನೇಕ ಬಾರಿ ಸತ್ತಿದ್ದಾರೆ ಅನ್ನುವ ಗುಮಾನಿಗಳನ್ನು ಅವರೇ ಹುಟ್ಟುಹಾಕಿ ಬ್ರಿಟೀಶರ ದಾರಿ ತಪ್ಪಿಸುತ್ತಿದ್ದರಂತೆ. ಹೀಗಾಗಿ ೧೯೪೫ರಲ್ಲಿ ತೈವಾನ್ ನ ಥೈಪೆಯಲ್ಲಿ ವಿಮಾನ ಅಪಘಾತದಲ್ಲಿ ಸುಭಾಷ್ ಇನ್ನಿಲ್ಲ ಎನ್ನುವ ಮಾಹಿತಿ ಬಂದಾಗ ಬ್ರಿಟೀಶರು ನಂಬಿರಲಿಲ್ಲ. ಅದೇ ಸಂದರ್ಭದಲ್ಲಿ ಸ್ವತಃ ಮಹಾತ್ಮ ಗಾಂಧಿ ಸಹ ಸುಭಾಷ್ ಬೋಸ್ ಮರಣಹೊಂದಿರುವುದು ಸಾಧ್ಯವಿಲ್ಲ. ಅವರು ಬದುಕಿದ್ದಾರೆ ಎಂದು ತಮಗನ್ನಿಸುತ್ತಿದೆ ಎಂದು ಹೇಳಿದ್ದರು. ಅದಾಗಲೇ ಸುಭಾಷರ ಆಜಾದ್ ಹಿಂದ್ ಸೈನ್ಯ ಭರ್ಮಾದ ರಂಗೂನ್ ನಿಂದ ಕಾರ್ಯಾಚರಿಸಿ ಇರಾವತಿ ನದಿ ದಾಟಿ ಚಲೋ ದಿಲ್ಲಿ ಎಂದು ಹೊರಟು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಗೆದ್ದು ಶಹೀದ್ ಮತ್ತು ಸ್ವರಾಜ್ ಎಂದು ಮರು ನಾಮಕರಣ ಮಾಡಿತ್ತಲ್ಲ. ಇದರ ಬಿಸಿ ಬ್ರಿಟೀಶ್ ಸೈನ್ಯಕ್ಕೆ ತಟ್ಟಿತ್ತು. ವಿಶ್ವಯುದ್ಧದಲ್ಲಿ ಜಪಾನ್ ಶರಾಣಾಗುತ್ತಿದ್ದಂತೆ, ಸುಭಾಷ್ ಕಮ್ಯೂನಿಸ್ಟ್ ರಷ್ಯಾದಲ್ಲಿ ಸ್ಟಾಲಿನ್ ಮೊರೆ ಹೋಗುತ್ತಾರೆ ಎನ್ನುವ ವದಂತಿಗಳೂ ಹಬ್ಬಿತ್ತಲ್ಲ. ಹಾಗಾಗಿ ಸುಭಾಷ್ ಉದ್ದೇಶಪೂರ್ವಕವಾಗಿ ವಿಮಾನ ಅಪಘಾತದಲ್ಲಿ ತಮ್ಮ ಮಿಥ್ಯ ಸಾವಿನ ಸುದ್ದಿಯನ್ನು ಹಬ್ಬಿಸಿದ್ದಾರೆ. ಇವತ್ತಲ್ಲ ನಾಳೆ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಕಮ್ಯೂನಿಸ್ಟರ ಸೇನೆಯೊಂದಿಗೆ ಚೀನಾ ಮೂಲಕ ಭಾರತವನ್ನು ಪ್ರವೇಶಿಸುತ್ತದೆ ಎನ್ನುವ ಭಯವೂ ಬ್ರಿಟೀಶ್ ರಾಜ್ ಗಿತ್ತು. ಹೀಗಾಗಿಯೇ 1945ರಲ್ಲಿ ಸುಭಾಷ್ ಕಣ್ಮರೆಯಾದರೆ 1947ರಲ್ಲೇ ಸ್ವಾತಂತ್ರ್ಯ ಘೋಷಿಸಲಾಯಿತು. ಈ ದಾರಿಯಲ್ಲಿ ಸಾಗುತ್ತದೆ ಆ ತರ್ಕ.
ಬೋಸ್ ಕುರಿತು ನಮಗೆಲ್ಲರಿಗೂ ಗೊತ್ತಿಲ್ಲದ ಕೆಲವು ಆಸಕ್ತಿಕರ ಸಂಗತಿಗಳು:
1) ಗಾಂಧಿ ಮತ್ತು ಬೋಸ್ ಸ್ವಾತಂತ್ರ್ಯ ಹೋರಾಟದ ಎರಡು ಪ್ರತ್ಯೇಕ ದ್ರುವಗಳೆಂದು ಗುರುತಿಸಲ್ಪಟ್ಟರೂ ಇಬ್ಬರ ನಡುವಿನ ಬಾಂದವ್ಯ ಅದ್ಭುತವಾಗಿತ್ತು. ಗಾಂಧಿಗೆ ಸುಭಾಷ್ ಬೋಸ್ ಅವರ ಹೋರಾಟದ ಕಿಚ್ಚು ಮೆಚ್ಚುಗೆಯಿತ್ತು. ಗಾಂಧಿಯ ಸಾಬರಮತಿ ಆಶ್ರಮದಲ್ಲಿ ಸುಭಾಷ್ ಬಾಬುವಿಗೆ ಮಾತ್ರ ಚಹಾ ಸೇವಿಸಲು ಅವಕಾಶವಿತ್ತು. 1939ರಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸುಭಾಷ್ ಜಯಗಳಿಸಿದ್ದರೂ ಗಾಂಧಿ ಅವರನ್ನು ಹಿಂದೆ ಸರಿಯುವಂತೆ ಹೇಳಿ ಪಟ್ಟಾಭಿ ಸೀತಾರಾಮಯ್ಯನವರನ್ನು ಅಧ್ಯಕ್ಷರನ್ನಾಗಿಸಿದ್ದರು. ಈ ಘಟನೆಯ ನಂತರವೂ ಸುಭಾಷ್ ಗಾಂಧಿಯ ಬಗ್ಗೆ ಕೊಂಚವೂ ಅಸಮಧಾನ ತೋರಲಿಲ್ಲ.
2) ಕೋಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಯಶಸ್ಸಿನ ಹಿಂದೆ ಸುಭಾಷ್ ಬೋಸ್ ಮತ್ತು ಜವಾಹರ್ ಲಾಲ್ ನೆಹರೂ ರವರ ಸಂಘಟನಾ ಸಾಮರ್ಥ್ಯವಿತ್ತು. ನೆಹರೂ ಈ ದೇಶದ ದೊಡ್ಡ ನಾಯಕರಾಗಬಹುದು ಎನ್ನುವ ಊಹೆಯನ್ನು ಸುಭಾಷ್ ಅಂದೇ ಮಾಡಿದ್ದರು. ಆದರೆ ಈ ದೇಶದ ಮೊದಲ ಪ್ರಧಾನಿಯಾಗಿದ್ದು ನೆಹರೂ ಅಲ್ಲ ಸುಭಾಷ್. ಆದರೆ ಅದು ಸ್ವಾತಂತ್ರ್ಯಾ ಪೂರ್ವದಲ್ಲಿ, ದೇಶದ ಹೊರಗೆ ಸಿಂಗಾಪುರದಲ್ಲಿ; ಅಜಾದ್ ಹಿಂದ್ ಫೌಜಿನ ರಚನೆಯ ಸಂದರ್ಭದಲ್ಲಿ.
3) ನೇತಾಜಿ ಜನಿಸಿದ್ದು 1897ರಲ್ಲಿ, ಅವರ ಕುಟುಂಬದ 9ನೆಯ ಮಗುವಾಗಿ. ಬಾಲ್ಯದಿಂದಲೇ ಅದ್ಭುತ ಬುದ್ದಿಮತ್ತೆ ಹೊಂದಿದ್ದ ಸುಭಾಷ್ ಐಸಿಎಸ್ ಪರೀಕ್ಷೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅಧ್ಯಯನ ಮಾಡಿ ನಾಲ್ಕನೆ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾಗ ಸುಭಾಷರ ಅಣ್ಣ ಶರತ್ ಚಂದ್ರ ಬೋಸ್, ದೇಶಬಂಧು ಚಿತ್ತರಂಜನ್ ದಾಸ್ ಗೆ ಪತ್ರ ಬರೆದು ನಿಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸುಭಾಷ್ ಬಾಬು ಬೌದ್ಧಿಕ ಸಹಕಾರ ನೀಡುತ್ತಾರೆ ಎಂದಿದ್ದರಂತೆ. ಆದರೆ ಅವರು ಸುಮ್ಮನೆ ಮಾತಿಗೆ ಹೇಳಿದ್ದೇ ಸತ್ಯವಾಗಿ ಕೊನೆಗೆ ಬ್ರಿಟೀಶ್ ವ್ಯವಸ್ಥೆಯಲ್ಲಿ ತಾವು ಊಳಿಗದ ಆಳಾಗಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿ ಸುಭಾಷ್ ಸ್ವತಂತ್ರ್ಯ ಹೋರಾಟಕ್ಕೆ ಧುಮುಕಿ ಗಾಂಧಿ ಸಹಿತ ಎಲ್ಲಾ ಹೋರಾಟಗಾರರ ಮನ ಗೆದ್ದುಬಿಟ್ಟರು.
4) ಚಲೋ ದಿಲ್ಲಿ, ನೀವು ರಕ್ತ ಕೊಡಿ ನಾನು ಸ್ವಾತಂತ್ರ್ಯ ಕೊಡಿಸುತ್ತೇನೆ, ರಕ್ತ ಮಾಂಸಗಳು ತುಂಬಿಕೊಂಡ ಬಿಸಿ ರಕ್ತದ ನನ್ನ ತಾರುಣ್ಯ ಕೇವಲ ದೇಶದ ಸ್ವಾತಂತ್ರ್ಯಕ್ಕೆ ಮೀಸಲು, ಶಾಂತಿಯಿಂದಲ್ಲ ಕ್ರಾಂತಿಯಿಂದ ಮಾತ್ರ ಬ್ರಿಟೀಶರ ಬಗ್ಗುಬಡಿಯಬಹುದು, ಇವತ್ತಲ್ಲ ನಾಳೆ ನೀವು ಸ್ವಾತಂತ್ರ್ಯ ಕೊಡಲೇಬೇಕು ನಿಮಗೆ ಬೇರೆ ದಾರಿಯೇ ಇಲ್ಲ, ಸ್ವಾತಂತ್ರ್ಯಾ ನಂತರದ ಭಾರತಕ್ಕೆ ಪ್ರತ್ಯೇಕ ಸೈನ್ಯದ ರಕ್ಷಣೆ ಬೇಕು ಹಾಗಾಗಿ ಸ್ವಾತಂತ್ರ್ಯಾ ಪೂರ್ವದಲ್ಲಿಯೇ ನಾನು ಸೈನ್ಯ ಕಟ್ಟುತ್ತಿದ್ದೇನೆ, ಇತ್ಯಾದಿ ಮಾತುಗಳು ಅವರ ರೇಡಿಯೋ ಭಾಷಣದಲ್ಲಿ ಅವರೇ ಹೇಳಿದ್ದು. ಜರ್ಮನಿಯ ಬರ್ಲಿನ್ ನಲ್ಲಿ ಸುಭಾಷ್ ಅಜಾದ್ ಹಿಂದ್ ರೇಡಿಯೋ ಸ್ಥಾಪಿಸಿದ್ದು 1943ರಲ್ಲಿ.
5) ಸುಭಾಷ್ ಬೋಸ್ ಪತ್ರಕರ್ತರೂ ಆಗಿದ್ದರು. ಅವರು ಚಿತ್ತರಂಜನ್ ದಾಸ್ ನಡೆಸುತ್ತಿದ್ದ ಫಾರ್ವರ್ಡ್ ಪತ್ರಿಕೆ ಸಂಪಾದಕರಾಗಿದ್ದರು. ನಂತರ ಸ್ವರಾಜ್ ಎನ್ನುವ ಪತ್ರಿಕೆ ಪ್ರಾರಂಭಿಸಿದರು. ಇಂಡಿಯನ್ ಸ್ಟ್ರಗಲ್ ಎನ್ನುವ ಪುಸ್ತಕವನ್ನೂ ಬರೆದರು.
6) ಬ್ರಿಟೀಶ್ ಆಡಳಿತ ನಿಜಕ್ಕೂ ಹೆದರಿದ್ದು ಸುಭಾಷ್ ಬೋಸ್ ರ ನಡೆಯ ಕುರಿತು. ಹೀಗಾಗಿ ಲೆಕ್ಕವಿಲ್ಲದಷ್ಟು ಬಾರಿ ಅವರ ಬಂಧನ ಬಿಡುಗಡೆ ನಡೆಯಿತು. 1921ರಿಂದ 1941ರ ನಡುವಿನ ಅವಧಿಯಲ್ಲಿ ಸುಭಾಚರನ್ನು 11 ಬಾರಿ ಬಂಧಿಸಿ ಭಾರತದ ಬೇರೆ ಬೇರೆ ಕಾರಾಗೃಹಗಳಲ್ಲಿ ಸೆರೆಯಲ್ಲಿಡಲಾಗಿತ್ತು. ಕೊನೆಗೂ ಅವರ ಮಹಾಪಲಾಯನವಾಗಿದ್ದು ಅವರು ಕಲ್ಕತ್ತಾದಲ್ಲಿ ಗೃಹಬಂಧನದಲ್ಲಿದ್ದಾಗಲೇ. ಸುಭಾಷ್ ಗಾಂಧಿಯನ್ನು ಎಷ್ಟು ಗೌರವಿಸುತ್ತಿದ್ದರೋ ಅಷ್ಟೇ ಗೌರವವನ್ನು ದೇಶಬಂಧು ಚಿತ್ತರಂಜನ್ ದಾಸ್ ಹಾಗೂ ಸಿಂಗಾಪುರದಲ್ಲಿದ್ದ ರಾಸ್ ಬಿಹಾರಿ ಬೋಸ್ ಮೇಲೆಯೂ ಹೊಂದಿದ್ದರು.
7) ಐಸಿಎಸ್ ಪಾಸು ಮಾಡಿದ್ದ ಸಮಯದಲ್ಲಿ ಕೋಲ್ಕತ್ತಾದ ಗವರ್ನರ್ ಜನರಲ್ ಕಚೇರಿಯಲ್ಲಿ ಅವರು ಕೈನಲ್ಲಿ ಛತ್ರಿಯೊಂದನ್ನು ಹಿಡಿದು ಭೇಟಿಗೆ ತೆರಳಿದ್ದರು. ಬೆಂಗಾಲಿಗಳು ಛತ್ರಿಯನ್ನು ಹಿಡಿದು ಹೊರಡುವುದು ಅವರ ಗೌರವ ಪ್ರತಿಷ್ಟೆ ಸಂಕೇತ. ಆದರೆ ಗವರ್ನರ್ ಜನರಲ್ ಕಚೇರಿಯಲ್ಲಿ ಛತ್ರಿ ಹಿಡಿದು ಬಂದ ಸುಭಾಷರನ್ನು ಪ್ರಶ್ನಿಸಲಾಯಿತು. ಆಗ ಹಿಂದೆ ಮುಂದೆ ನೋಡದೇ ಅದೇ ಛತ್ರಿಯನ್ನು ತಮ್ಮ ಕತ್ತಿನ ಪಕ್ಕದಲ್ಲಿಟ್ಟುಕೊಂಡು ನಿಮ್ಮ ವರ್ತನೆ ಸರಿಮಾಡಿಕೊಳ್ಳಿ ಎಂದು ದಿಟ್ಟತನದಿಂದ ಉತ್ತರಿಸಿದ್ದರು ಸುಭಾಷ್.
8) ಜರ್ಮನಿಯಿಂದ ಮಡಗಾಸ್ಗರ್ ಗೆ ಜರ್ಮನ್ ಸಬ್ ಮೆರಿನ್ ಯು-180ಯಲ್ಲಿ ಆನಂತರ ಅಲ್ಲಿಂದ ಜಪಾನ್ ಗೆ ಜಪಾನ್ ಸಬ್ ಮೆರಿನ್ ಐ-29ರಲ್ಲಿ ಅತ್ಯಂತ ದೂರದ ಹಾದಿಯನ್ನು ಸಮುದ್ರದಾಳದಲ್ಲಿ ಜೀವದ ಹಂಗು ತೊರೆದು ಪಯಣಿಸಿದ ಧೀರ ಸೇನಾನಿ ಸುಭಾಷ್ ಬೋಸ್.
9) ಈ ದೇಶದ ಅತ್ಯಂತ ದೊಡ್ಡ ಮಿಸ್ಟರಿ ಎಂದರೆ ಸುಭಾಷ್ ಬೋಸ್ ರ ಕಣ್ಮರೆ ಅಥವಾ ಸಾವಿನ ಸುದ್ದಿ. ಇದಕ್ಕಾಗಿ ಅನೇಕ ತನಿಖಾ ಆಯೋಗಗಳ ರಚನೆಯಾಯಿತು. ಆದರೆ ಉತ್ತರ ಮಾತ್ರ ಸಿಗಲಿಲ್ಲ. ಕೆಲವು ನಂಬಿಕೆಗಳ ಪ್ರಕಾರ ಸುಭಾಷ್ ಗುಮ್ನಾಬಿ ಬಾಬಾ ಎನ್ನುವ ಮೌನಿ ಸಂತನ ವೇಷದಲ್ಲಿ 1985ರವರೆಗೂ ಫೈಜಾಬಾದ್ ನ ಆಶ್ರಮವೊಂದರಲ್ಲಿ ಬದುಕಿದ್ದರು. ಗುಮ್ನಾಮಿ ಬಾಬಾ ಎನ್ನುವ ಸನ್ಯಾಸಿ ನಾಲ್ಕು ಬಾರಿ ತಾವೇ ಸುಭಾಷ್ ಎನ್ನುವುದಾಗಿ ಒಪ್ಪಿಕೊಂಡಿದ್ದರು ಎನ್ನುವ ಮಾತುಗಳಿವೆ. ಬಾಬಾ ಸತ್ತ ನಂತರ ಅವರ ಕೊಠಡಿಯಲ್ಲಿ ಸುಭಾಷ್ ಬಳಸುತ್ತಿದ್ದ ಟೈಪ್ ರೈಟರ್, ಬೈನಾಕ್ಯುಲರ್, ಗುಂಡು ಆಕಾರದ ಕನ್ನಡಕ, ವಾಚ್ ಮತ್ತು ಐದು ಹಲ್ಲುಗಳು ದೊರೆತಿದ್ದವು.
ಸುಭಾಷ್ ಚಂದ್ರ ಬೋಸ್ ಓರ್ವ ದಣಿವರಿಯದ ದಂಡನಾಯಕ. ಅದಮ್ಯ ಉತ್ಸಾಹವಿದ್ದ ಅಪರೂಪದ ಧೀಮಂತ ನಾಯಕ. ಸಂಘಟನಾ ಚತುರ, ಶಿಸ್ತಿನ ಸರಳ ಜೀವಿ, ದೇಶಕ್ಕಾಗಿ ಐಸಿಎಸ್ ಹುದ್ದೆ ತ್ಯಾಗ ಮಾಡಿದ್ದ ದ್ಯೇಯೋದ್ಧಾತ. ಕೊನೆಗೆ ಸುಭಾಷ್ ಬೋಸ್ ಸಾವೂ ಸಹ ಬೇಧಿಸಲಾಗದ ರಹಸ್ಯವಾಗೇ ಉಳಿಯಿತು. ಆದ್ರೆ ಸುಭಾಷ್ ಚಂದ್ರ ಬೋಸ್ ಅನ್ನುವ ಅಮರ ಸೇನಾನಿ ಅಸಂಖ್ಯ ಭಾರತೀಯರ ಮನಸಿನಲ್ಲಿ ಅಜರಾಮರರಾಗಿ ಉಳಿದರು. ಜನವರಿ 23, 1897ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮಜಯಂತಿ ಇಂದು. ಆ ಅಮರ ಚೇತನಕ್ಕೆ ಜನ್ಮಜಯಂತಿಯ ಶುಭಕಾಮನೆಗಳು.
-(ವಿಭಾ) ವಿಶ್ವಾಸ್ ಭಾರದ್ವಾಜ್,
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel