ಡಿ. ರಾಘವೇಂದ್ರ… ಭಾರತೀಯ ಕ್ರಿಕೆಟ್ ವಲಯದಲ್ಲಿ ಈ ಹೆಸರು ಚಿರಪರಿಚಿತ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಾಲ್ತಿಯಲ್ಲಿರುವ ಹೆಸರು. ಸುಮಾರು 18 -19 ವರ್ಷಗಳಿಂದ ಡಿ. ರಾಘವೇಂದ್ರ ಚಿನ್ನಸ್ವಾಮಿ ಕ್ರೀಡಾಂಗಣದ ಎನ್‍ಸಿಎ ಆವರಣದಲ್ಲಿದ್ದ ಹುಡುಗ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೆಟ್ಸ್ ನಲ್ಲಿ ಬೌಲಿಂಗ್ ಮಿಷನ್ ಆಗಿದ್ದ ರಾಘವೇಂದ್ರನ ಪ್ರತಿಭೆಯನ್ನು ಬೆಳಕಿಗೆ ತಂದಿದ್ದು ಸಚಿನ್ ತೆಂಡುಲ್ಕರ್. ಬಹುಶಃ ಸಚಿನ್ ಆಗ ಟೆನಿಸ್ ಎಲ್ಬೋ ನೋವಿನಿಂದ ಚೇತರಿಸಿಕೊಂಡಿದ್ದರು. ಆಗ ಸಚಿನ್‍ಗೆ ನೆಟ್ಸ್ ನಲ್ಲಿ ಬೌಲಿಂಗ್ (ಸೈಡ್ ಆರ್ಮ್) ಮಾಡುತ್ತಿದ್ದದ್ದು ಇದೇ ರಾಘವೇಂದ್ರ.
ನೀವು ನಂಬುತ್ತಿರೋ ಬಿಡ್ತಿರೋ… ಇದೇ ರಾಘವೇಂದ,್ರ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್‍ಗೂ ಬ್ಯಾಟಿಂಗ್ ಸಲಹೆಯನ್ನು ನೀಡುತ್ತಿದ್ದ. ಜೊತೆಗೆ ಸಚಿನ್ ತೆಂಡುಲ್ಕರ್‍ಗೆ ಬೇಕಾದ ರೀತಿಯಲ್ಲಿ ಚೆಂಡನ್ನು ಎಸೆಯುತ್ತಿದ್ದ. ಹೀಗೆ ಸಚಿನ್ ಮತ್ತು ರಾಘವೇಂದ್ರ ನಡುವೆ ಉತ್ತಮ ಬಾಂಧವ್ಯವೂ ಬೆಳೆಯಿತ್ತು. ಆಗಾಗ ಮುಂಬೈ, ಸೇರಿದಂತೆ ಬೇರೆ ಬೇರೆ ಕಡೆ ನಡೆಯುವ ಕ್ರಿಕೆಟ್ ಸರಣಿಗಳ ವೇಳೆ ಸಚಿನ್‍ಗೆ ನೆಟ್ಸ್ ನಲ್ಲಿ ರಾಘವೇಂದ್ರನೇ ಚೆಂಡನ್ನು ಎಸೆಯಬೇಕಿತ್ತು. ಹಾಗೇ ವಿದೇಶಿ ಸರಣಿಯ ವೇಳೆಯಲ್ಲೂ ಸಚಿನ್ ಕರೆಸಿಕೊಂಡಿದ್ದರು.
ಇನ್ನು 2013ರ ನಂತರ ರಾಘವೇಂದ್ರ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ನಲ್ಲಿ ಕಾಣಿಸಿಕೊಂಡ. ನಂತರ ಹಿಂತಿರುಗಿ ನೋಡಲೇ ಇಲ್ಲ. ನೆಟ್ಸ್ ನಲ್ಲಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಬ್ಯಾಟ್ಸ್ ಮೆನ್‍ಗಳಿಗೆ ಚೆಂಡನ್ನು ಎಸೆಯುತ್ತಿದ್ದ ರಾಘವೇಂದ್ರನನ್ನು ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು.
ಅಂದು ಸಚಿನ್ ತೆಂಡುಲ್ಕರ್‍ನಿಂದ ಮೆಚ್ಚುಗೆಗೆ ಒಳಪಟ್ಟಿರುವ ರಾಘವೇಂದ್ರ ಈಗ ವಿರಾಟ್ ಕೊಹ್ಲಿಯ ಗಮನ ಕೂಡ ಸೆಳೆದಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ರಾಘವೇಂದ್ರನಿಗೆ ದೊಡ್ಡ ಗೌರವವನ್ನೇ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ವೇಗದ ಬೌಲರ್‍ಗಳ ಎದುರು ಉತ್ತಮ ಪ್ರದರ್ಶನ ನೀಡಲು ಪ್ರಮುಖ ಕಾರಣ ಡಿ. ರಾಘವೇಂದ್ರ. ರಾಘವೇಂದ್ರನಿಗೆ ಬ್ಯಾಟ್ಸ್‍ಮೆನ್‍ಗಳ ಫುಟ್‍ವರ್ಕ್ ಮತ್ತು ಚಲನವಲನಗಳನ್ನು ಬಲುಬೇಗನೇ ಅರ್ಥಮಾಡಿಕೊಳ್ಳುತ್ತಾನೆ. ನೆಟ್ಸ್ ನಲ್ಲಿ 150-155 ವೇಗದಲ್ಲಿ ಚೆಂಡನ್ನು ಎಸೆಯುತ್ತಿರುವುದರಿಂದ ವೇಗದ ಬೌಲರ್‍ಗಳ ಎದುರು ಯಾವ ರೀತಿ ಆಡಬೇಕು ಎಂಬುದು ಗೊತ್ತಾಗುತ್ತಿತ್ತು. ಹೀಗಾಗಿ ನೆಟ್ಸ್ ನಲ್ಲಿ ರಾಘವೇಂದ್ರನ ಎಸೆತಗಳನ್ನು ಎದುರಿಸಿಕೊಂಡು ಮೈದಾನಕ್ಕೆ ಇಳಿದ್ರೆ ಲೀಲಾಜಾಲವಾಗಿ ವೇಗದ ಬೌಲರ್‍ಗಳನ್ನು ಎದುರಿಸಲು ಆಗುತ್ತದೆ ಅಂತ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದ ರಾಘವೇಂದ್ರ ನಾನಾ ಕಾರಣಗಳಿಂದ ಕ್ರಿಕೆಟ್ ಆಟಗಾರನಾಗಲಿಲ್ಲ. ಆದ್ರೆ ಈಗ ಕ್ರಿಕೆಟ್ ಆಟಗಾರರನ್ನು ಆಡಿಸುತ್ತಿರುವುದು ಮಾತ್ರ ಅಚ್ಚರಿಯ ಸಾಧನೆಯೇ ಸರಿ. ಗೊತ್ತು ಗುರಿ ಇಲ್ಲದೆ ಬೆಂಗಳೂರಿಗೆ ಬಂದಿರುವ ರಾಘವೇಂದ್ರ ಈಗ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ನಲ್ಲಿ ಒಬ್ಬನಾಗಿದ್ದಾರೆ.








