ಬೆಂಗಳೂರು, ಜೂನ್ 25: ಇಂದು ರಾಜ್ಯದಲ್ಲಿ ಕೊರೊನಾ ಆತಂಕದ ನಡುವೆ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ರಾಜ್ಯದೆಲ್ಲೆಡೆ ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇದು ಎಲ್ಲರ ಐತಿಹಾಸಿಕ ಗೆಲುವು ಎಂದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ 3209 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಾಯಿತ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.3 ರಷ್ಟು ಇಂದು ಹಾಜರಾತಿ ದಾಖಲಾಗಿದ್ದು, 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮಾಸ್ಕ್ ತೊಟ್ಟು ಬೆಳಿಗ್ಗೆ 7.30 ರಿಂದಲೇ ಪರೀಕ್ಷಾ ಕೇಂದ್ರಕ್ಕೆ ಬರಲು ಆಗಮಿಸಿದ್ದ ವಿದ್ಯಾರ್ಥಿಗಳು ಬಹುತೇಕ ಕಡೆ ಅಂತರ ಕಾಯ್ದುಕೊಂಡು ತಮ್ಮ ಶಿಸ್ತನ್ನು ತೋರಿಸಿದರು. ಧ್ವನಿವರ್ಧಕದಲ್ಲಿ ಮಕ್ಕಳನ್ನು ಎಚ್ಚರಿಸುವ ಕೆಲಸವೂ ಬಹುತೇಕ ಕಡೆ ನಡೆಯಿತು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.