ಯು.ಎಸ್, ಮೇ 21 : ಬಯೋಟೆಕ್ನಾಲಜಿ ಸಂಸ್ಥೆ ಮಾಡರ್ನಾ ಕೊರೊನಾ ವೈರಸ್ ಸೋಂಕಿನ (ಕೋವಿಡ್ -19) ವಿರುದ್ಧ ಲಸಿಕೆ ಹುಡುಕುವಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಬಯೋಟೆಕ್ ಕಂಪೆನಿ ಮೊಡೆರ್ನಾ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಜತೆಗೂಡಿ ಕೋವಿಡ್-19 ಲಸಿಕೆಯನ್ನು ಸಂಶೋಧಿಸುತ್ತಿದ್ದು, ಎಂಟು ರೋಗಿಗಳ ಮೇಲೆ ಪ್ರಯೋಗಿಸಿದಾಗ ಆಶಾದಾಯಕ ಆರಂಭಿಕ ಫಲಿತಾಂಶಗಳು ಬಂದಿವೆ. ಸಂಶೋಧನೆಗಳು ಸರಿಯಾದ ರೀತಿಯಲ್ಲಿ ಸಾಗಿದರೆ ಮುಂದಿನ ಜನವರಿ ವೇಳೆ ಲಸಿಕೆ ಲಭ್ಯವಾದೀತೆಂದು ಮಾಡರ್ನಾದ ಮುಖ್ಯ ವೈದ್ಯಾಧಿಕಾರಿ ಡಾ|ಟಾಲ್ ಝಾಕ್ಸ್ ಅವರು ತಿಳಿಸಿದ್ದಾರೆ.
ಕೊರೋನಾ ಲಸಿಕೆಯ ಪ್ರಯೋಗಾಲಯದ ಪ್ರಥಮ ಪರೀಕ್ಷಾ ಹಂತದಲ್ಲಿ ಆರಂಭಿಕ ಫಲಿತಾಂಶ ಬಂದಿದ್ದು, ಈ ಹಂತದಲ್ಲಿ ಲಸಿಕೆಯನ್ನು ವ್ಯಕ್ತಿಗಳ ಮೇಲೆ ಪ್ರಯೋಗಿಸಿ ಲಸಿಕೆ ಸುರಕ್ಷಿತವೇ ಮತ್ತು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆಯೇ ಎಂದು ನೋಡಲಾಗುತ್ತದೆ. ಈಗಾಗಲೇ ಮನುಕುಲವನ್ನು ಕಾಡಿರುವ ಕೋವಿಡ್-19 ವಿರುದ್ಧ ಲಸಿಕೆಯನ್ನು ಕಂಡು ಹಿಡಿಯುವ ಕಾರ್ಯದಲ್ಲಿ ಅಮೆರಿಕದ ಇನ್ನೆರಡು ಸಂಸ್ಥೆಗಳಾದ ಫೈಝರ್ ಮತ್ತು ಇನೊವಿಯೊ, ಬ್ರಿಟನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಚೀನದ ನಾಲ್ಕು ಸಂಸ್ಥೆಗಳು ತೊಡಗಿಸಿ ಕೊಂಡಿವೆ. ಸಂಶೋಧನೆಯಲ್ಲಿ ರೋಗನಿರೋಧಕ ಪ್ರತಿಕಾಯಗಳು ವೈರಾಣುವನ್ನು ಪ್ರತಿಬಂಧಿಸಿ ಮಾನವನ ಜೀವಕೋಶಗಳ ಮೇಲೆ ಅದು ದಾಳಿ ಮಾಡದಂತೆ ತಡೆಯುತ್ತವೆ. ಮಾಡರ್ನಾದ ಮುಖ್ಯ ವೈದ್ಯಾಧಿಕಾರಿ ಡಾ|ಟಾಲ್ ಝಾಕ್ಸ್ ಅವರು ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸುವಲ್ಲಿ ಇದೊಂದು ಅತ್ಯಂತ ಮಹತ್ವದ ಮೊದಲ ಹೆಜ್ಜೆ, ಸಂಸ್ಥೆಯ ಫಲಿತಾಂಶ ಅತ್ಯುತ್ತಮವಾದುದು ಎಂದು ಹೇಳಿದ್ದಾರೆ.
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಇದೀಗ ಎರಡನೆ ಹಂತದ ಪ್ರಯೋಗಕ್ಕೆ ಅನುಮತಿ ನೀಡಿದ್ದು, ಇದರಲ್ಲಿ ನೂರಾರು ಜನರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಎರಡನೇ ಹಂತದ ಫಲಿತಾಂಶದಲ್ಲಿ ಸಕಾರಾತ್ಮಕ ಫಲಿತಾಂಶ ದೊರಕಿದರೆ ಮೂರನೇ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಇದರಲ್ಲಿ ಸಹಸ್ರಾರು ಮಾನವರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ. ಮಾಡರ್ನಾ ಜುಲೈಯಲ್ಲಿ ಮೂರನೇ ಹಂತವನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದೆ.
ಪ್ರಪಂಚದಾದ್ಯಂತ ಯಾವುದೇ ಲಸಿಕೆಯನ್ನು ಅಧಿಕೃತಗೊಳಿಸುವ ಮೊದಲು ಹಲವಾರು ಪ್ರೋಟೋಕಾಲ್ಗಳಿವೆ – ಕ್ಲಿನಿಕಲ್ ಟ್ರಯಲ್ಸ್ ಸೇರಿದಂತೆ – ಯಾವುದೇ ಔಷಧಿ ಅಥವಾ ಲಸಿಕೆಗಳನ್ನು ಪರಿಣಾಮಕಾರಿ ಎಂದು ಕರೆಯುವ ಮೊದಲು ಮತ್ತು ಅದನ್ನು ಅನುಮೋದಿಸುವ ಮೊದಲು ಅದನ್ನು ಅನುಸರಿಸಬೇಕಾಗುತ್ತದೆ. ಇದು ಪ್ರಯೋಗದ ಮೊದಲ ಹಂತವಾಗಿದ್ದು ಮತ್ತು ಇನ್ನೂ ಕೆಲವು ಹಂತಗಳನ್ನು ದಾಟಬೇಕಿದೆ. ಯುಎಸ್ ನಲ್ಲಿ, ಈ ಪ್ರೋಟೋಕಾಲ್ ಅನ್ನು ಆಹಾರ ಮತ್ತು ಔಷಧ ಆಡಳಿತವು ನಿಗದಿಪಡಿಸಿದೆ ಮತ್ತು ಯುಎಸ್ ನಲ್ಲಿ ಯಾವುದೇ ಲಸಿಕೆಯನ್ನು ಅಧಿಕೃತಗೊಳಿಸುವ ಮೊದಲು ಮೂರು ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಕಡ್ಡಾಯಗೊಳಿಸಿದೆ.
ಈ ಸಂಪೂರ್ಣ ಪ್ರಕ್ರಿಯೆಯುನಡೆಯಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಪೂರ್ಣಗೊಳ್ಳಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಲಸಿಕೆ ಅಭಿವೃದ್ಧಿಪಡಿಸುವ ಸಂಸ್ಥೆಗಳು ಮೂರನೆ ಹಂತದ ಪರೀಕ್ಷೆಗೆ ನಡೆಸುವ ಮುನ್ನ ಸಾಮಾನ್ಯವಾಗಿ ಸಹಸ್ರಾರು ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸುತ್ತವೆ. ಆದರೆ ಮಾಡರ್ನಾ ಈವರೆಗೆ ಕೇವಲ ಬೆರಳೆಣಿಕೆಯ ಮಂದಿಯ ಮೇಲೆ ಮಾತ್ರ ಲಸಿಕೆಯನ್ನು ಪ್ರಯೋಗಿಸಿರುವುದರಿಂದ ಮೂರನೆ ಹಂತದ ಪರೀಕ್ಷೆಗೆ ಮುಂದಾಗುವ ಮುನ್ನ ಅಷ್ಟೊಂದು ಮಂದಿಯ ಮೇಲೆ ಲಸಿಕೆಯನ್ನು ಪ್ರಯೋಗಿಸುವ ಸಾಧ್ಯತೆ ಇಲ್ಲ.
ಜಗತ್ತಿನಾದ್ಯಂತ ಅಟ್ಟಹಾಸದಿಂದ ಮೆರೆಯುತ್ತಿರುವ ಕೊರೋನಾ ವೈರಸ್ ಸೋಂಕಿನಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದರೆ, ಕೋಟ್ಯಂತರ ಜನ ಸೋಂಕಿನಿಂದ ಬಳಲುತ್ತಿದ್ದಾರೆ. ಕೊರೋನಾ ಸೋಂಕಿಗೆ ತಕ್ಕ ಪಾಠ ಕಲಿಸಲು ಎಲ್ಲಾ ರಾಷ್ಟ್ರಗಳು ಕಾಯುತ್ತಿದ್ದು, ಅದರ ವಿರುದ್ಧ ಹೋರಾಡಲು ಲಸಿಕೆಗಳನ್ನು ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಇದುವರೆಗೆ ಸುಮಾರು 80ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಲಸಿಕೆಯನ್ನು ಕಂಡು ಹಿಡಿಯಲು ಹಗಲಿರುಳು ಶ್ರಮಿಸುತ್ತಿವೆ.








