ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಟಿ20 ಟೂರ್ನಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ತಂಡ ಗೆದ್ದು ಬೀಗಿದೆ. ನಾಲ್ಕನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ.
ಈಗಾಗಲೇ 4 ಪಂದ್ಯಗಳು ಮುಗಿದಿದ್ದು, 3-1 ಅಂತರದಲ್ಲಿ ಟೀಂ ಇಂಡಿಯಾ ಸರಣಿ ಕೈ ವಶಪಡಿಸಿಕೊಂಡಿದೆ. ಐದನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್ ರಾಝಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಇಳಿದ ಯಶಸ್ವಿ ಜೈಸ್ವಾಲ್ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಬರೋಬ್ಬರಿ 12 ರನ್ ಗಳಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಜಿಂಬಾಬ್ವೆ ಪರ ಮೊದಲ ಓವರ್ ನ್ನು ನಾಯಕ ಸಿಕಂದರ್ ರಾಝಾ ಬೌಲ್ ಮಾಡಿದರು. ಮೊದಲ ಎಸೆತ ನೋ ಬಾಲ್ ಆಗಿತ್ತು. ಸ್ಟ್ರೈಕ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಆ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇದಾದ ನಂತರ ಜೈಸ್ವಾಲ್ ತಮ್ಮ ಮುಂದಿನ ಎಸೆತದಲ್ಲೂ ಸಿಕ್ಸ್ ಸಿಡಿಸಿದರು.
ಈ ಮೂಲಕ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ಬರೋಬ್ಬರಿ 12 ರನ್ ಗಳಿಸಿದ ಯಶಸ್ವಿ ಜೈಸ್ವಾಲ್, ಅಂತಾರಾಷ್ಟ್ರೀಯ ಕ್ರಿಕೆಟ್ನ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಇಷ್ಟು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದಾಗ್ಯೂ ಜೈಸ್ವಾಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಹೆಚ್ಚು ಹೊತ್ತು ಉಳಿಯಲಿಲ್ಲ. ಅವರು ಮೊದಲ ಓವರ್ ನ ನಾಲ್ಕನೇ ಎಸೆತದಲ್ಲಿಯೇ ಬೋಲ್ಡ್ ಆದರು.
ಜಿಂಬಾಬ್ವೆ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಬ್ಟ್ಬರ ಜೋರಾಗಿತ್ತು. ಜೈಸ್ವಾಲ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಏಕಪಕ್ಷೀಯವಾಗಿ ಗೆಲ್ಲುವಂತೆ ಮಾಡಿದರು. 53 ಎಸೆತಗಳಲ್ಲಿ 93 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು.








