ಒಂದಷ್ಟು ಜನ ಫೇಸ್ ಬುಕ್ ನಲ್ಲಿ ಖುಲ್ಲಂಖುಲ್ಲಾ ಮುಸಲ್ಮಾನ ತರಕಾರಿ ಹಣ್ಣಿನ ವ್ಯಾಪಾರಿಗಳಿಂದ ಖರೀದಿಸಬೇಡಿ ಎಂದು ಕರೆ ಕೊಡ್ತಿದ್ದಾರೆ. ಟೋಪಿಯವರು ಗಡ್ಡದವರು ತುರ್ಕರು ಇವರನ್ನು ಹತ್ತಿರ ಸೇರಿಸಬೇಡಿ ಎನ್ನುವ ಪೋಸ್ಟ್ ಗಳನ್ನು ನೋಡಿದೆ. ಇಷ್ಟು ವರ್ಷ ಅದೇ ವರ್ತಕರಿಂದಲ್ಲವೇ ತರಕಾರಿ ಹಣ್ಣು ಕೊಂಡುಕೊಳ್ಳುತ್ತಿದ್ರಿ. ಯಾವತ್ತಾದರೂ ನಿಮಗೆ ತೊಂದರೆಯಾಗಿತ್ತಾ? ಆ ವ್ಯಾಪಾರಿಗೂ ಅದು ಹೊಟ್ಟೆಪಾಡಲ್ಲವೇ? ಅವನಿಗೂ ಒಂದು ಕುಟುಂಬ ಮಕ್ಕಳು ಮರಿ ಅಂತಿಲ್ಲವೇ? ಅವನಿಗೂ ಹಸಿವು ಇದೆ ಅಲ್ಲವೇ?
ಯಾರನ್ನು ದೂಷಣೆ ಮಾಡಬೇಕೀಗ?
ಇಡೀ ವ್ಯವಸ್ಥೆಯನ್ನು ನಾಶ ಮಾಡಿದ ಕರೋನಾ ವೈರಸ್ ಅನ್ನಾ? ಧರ್ಮದ ಅಮಲು ತಲೆಗೇರಿಸಿಕೊಂಡು ಸೋಂಕು ಹರಡಿದ ತಬ್ಲಿಕ್ ಜಮಾತ್ ನ ಕುರುಡು ಧಾರ್ಮಿಕವಾದಿಗಳನ್ನಾ? ಮುಸಲ್ಮಾನ ಸಮುದಾಯದವರಲ್ಲಿ ಧಾರ್ಮಿಕ ಮೌಢ್ಯಗಳನ್ನು ಭಿತ್ತಿ ದಾರಿ ತಪ್ಪಿಸಿದ ದುರುಳ ಧರ್ಮಗುರುಗಳನ್ನಾ? ಶತಶತಮಾನಗಳಿಂದ ಸೌಹಾರ್ಧತೆಯಿಂದ ಬಾಳಿ ಬದುಕಿದ ಸಮುದಾಯಗಳ ಮಧ್ಯೆ ಗೋಡೆ ಕಟ್ಟುತ್ತಿರುವ ರಾಜಕೀಯ ನಾಯಕರನ್ನಾ? ಅಥವಾ ಸೋಶಿಯಲ್ ಮಾಧ್ಯಮಗಳಲ್ಲಿ ಧರ್ಮದ ಹೆಸರಲ್ಲಿ ಜನಸಮೂಹದಲ್ಲಿ ವಿಷಪ್ರಾಷನ ಮಾಡುತ್ತಿರುವ ಅತಿರೇಖಿಗಳನ್ನಾ?
ಧರ್ಮದ ಹೆಸರಿನಲ್ಲಿ ಸಮಾಜಿಕ ಶಾಂತಿಗೆ ಭಂಗ ತಂದಿದ್ದು ಒಂದಷ್ಟು ಮೂಲಭೂತವಾದಿ ಮೂರ್ಖರು. ಆದರೆ ಭಾಗಶಃ ಈ ದೇಶಕ್ಕೆ ನಿಷ್ಟರಾದ ಈ ನೆಲದ ಕಾನೂನು ಗೌರವಿಸುವ ಮುಸಲ್ಮಾನರು ಏನು ಅನ್ಯಾಯ ಮಾಡಿದ್ದಾರೆ? ಬಡತನದ ವಿಷವರ್ತುಲ ಅವರನ್ನೂ ಸುತ್ತುಕೊಂಡಿಲ್ಲವೇ? ಅವತ್ತಿನ ದುಡಿಮೆ ಅವತ್ತಿನ ಅನ್ನಕ್ಕೆ ಎಂದು ರಸ್ತೆಗಿಳಿಯುವ ನಿಷ್ಪಾಪಿ ಮುಸಲ್ಮಾನ ವ್ಯಾಪಾರಿಗಳು ಈ ದೇಶದ ಪ್ರಜೆಗಳಲ್ಲವೇ? ಮೊದಲು ಮಾನವರಾಗಿ! ಕರ್ಮಠತನದಿಂದ ಮೌಢ್ಯದಿಂದ ಅತಿರೇಖದಿಂದ ದಾರಿತಪ್ಪಿದ ಪುಂಡ ಮಕ್ಕಳನ್ನು ಸರಿಮಾಡಲು ಕಾನೂನುಗಳಿವೆ ಸರ್ಕಾರವಿದೆ.
ಇದು ವಿಷಮ ಸ್ಥಿತಿ, ಇದನ್ನು ಒಗ್ಗಟ್ಟಿನಿಂದಲ್ಲದೇ ಎದುರಿಸಲು ಸಾಧ್ಯವಿಲ್ಲ. ಮುಸಲ್ಮಾನ ಸಮುದಾಯದ ಕೆಲವು ಮೌಢ್ಯದ ವಿರುದ್ಧ ಧ್ವನಿ ಎತ್ತಲು ಅವರದ್ದೇ ಸಮಾಜದ ಯುವ ಉತ್ಸಾಹಿ ಸಂವೇಧನಾಶೀಲ ಮನಸುಗಳು ಸಿದ್ಧವಾಗುತ್ತಿವೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡಿ. ನಮ್ಮದು ಶಾಂತಿಮಂತ್ರವನ್ನು ವಿಶ್ವಕ್ಕೆ ಬೋಧಿಸಿದ ರಾಷ್ಟ್ರ ಅನ್ನುವುದು ನೆನಪಿರಲಿ.
ಯಾವ ಕಾಲದಲ್ಲಿದ್ದೇವೆ ನಾವು?
ಜಗತ್ತು ಇಷ್ಟು ಮುಂದುವರೆದಾಗಲೂ ನಮ್ಮಲ್ಲಿ ವಿವೇಕ, ಪ್ರಜ್ಞಾವಂತಿಕೆ ಎಚ್ಚರಗೊಂಡಿಲ್ಲವೇ? ಇನ್ನೂ ಧರ್ಮದ ಹೆಸರಿನಲ್ಲಿ ಕಂದಕ ತೋಡುತ್ತಲೇ ಇದ್ದೇವೆ. ಈ ಮಾತು ನಮಗಷ್ಟೇ ಅಲ್ಲ ಸಮುದಾಯದ ದಾರಿ ತಪ್ಪಿಸುವ ಕೆಲ ಮುಸಲ್ಮಾನ ಧರ್ಮಗುರುಗಳಿಗೂ ಅನ್ವಯಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ನೀವು ಹಬ್ಬಿಸುವ ಒಂದೇ ಒಂದು ದ್ವೇಷದ ಸಂದೇಶ ಸಮೂಹಸನ್ನಿಯಂತೆ, ಭೀಕರ ಸಾಂಕ್ರಾಮಿಕ ರೋಗದಂತೆ ಸಮಾಜದ ತುಂಬಾ ಹರಡುತ್ತದೆ. ಶಾಂತಿ ಸುವ್ಯವಸ್ಥೆ ಕದಡಬೇಡಿ. ದಯೆ ನಮ್ಮ ಎಲ್ಲಾ ಧರ್ಮಗಳ ಮೂಲನೆಲೆ. ಕರುಣೆ ಸಹಾನುಭೂತಿ ಮತ್ತು ಪ್ರೀತಿಗಳೇ ಧರ್ಮದ ನಿಜವಾದ ವ್ಯಾಖ್ಯಾನ. ನಾವು ನಂಬುವ ಭಗವಂತನಿಗೆ ಇವೇ ಬೇಕು ವಿನಃ ದ್ವೇಷವೂ ಅಲ್ಲ ವಿಷವೂ ಅಲ್ಲ ಸಂಘರ್ಷವೂ ಅಲ್ಲ. ಈ ಭರತ ಭೂಮಿಯ ಶ್ರೇಷ್ಠತೆ ಇರುವುದೇ ಇಲ್ಲಿ ಸರ್ವಧರ್ಮ ಸಹಿಷ್ಣುತೆಯಲ್ಲಿ, ಬಹುತ್ವದಲ್ಲಿ ಮತ್ತು ಐಕಮತ್ಯದಲ್ಲ. ದಯವಿಟ್ಟು ಕುರುಡಾಗಬೇಡಿ.
– ವಿಭಾ








