ಭಾರತೀಯ ಅಂಚೆ ಇಲಾಖೆಯು ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರ “ವಿಶೇಷ ಅಂಚೆ ಲಕೋಟೆ” ಯನ್ನು ಹೊರ ತರುತ್ತಿದೆ.
ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ “ವಿಶೇಷ ಅಂಚೆ ಲಕೋಟೆಯನ್ನು ” ಬಿಡುಗಡೆ ಮಾಡುತ್ತದೆ.
ಅದೇ ಪ್ರಕಾರ 25ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.
ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ “ವಿಶೇಷ ಅಂಚೆ ಲಕೋಟೆ” ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.