ಬೆಂಗಳೂರು : ಚತುರ್ವೇದ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿ ಇಂದು ಕೊನೆಯುಸಿರೆಳೆದಿದ್ದು,ಚಾಮರಾಜಪೇಟೆ ಚಿತಾಗಾರದಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಿದೆ.
ಮೃತರಿಗೆ 124 ವರ್ಷ ವಯಸ್ಸಾಗಿತ್ತು. ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಗಳಾದ ಪಂಡಿತ ಸುಧಾಕರ ಚತುರ್ವೇದಿ ಇಂದು ಮುಂಜಾನೆ ನಿಧನರಾದರು. ಜಯನಗರ ಕೃಷ್ಣಸೇವಾಶ್ರಮದ ಎದುರಿನ ನಿವಾಸದಲ್ಲಿ ಇಂದು ಮಧ್ಯಾಹ್ನ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಕೊಡಲಾಗಿತ್ತು.
ಸಾವಿರಾರು ಜನತೆ ಹತ್ಯೆಯಾದ 1919ರ ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡವನ್ನು ಕಣ್ಣಾರೆ ಕಂಡಿದ್ದ ಸುಧಾಕರ್ ಅವರು ದೇಶದಲ್ಲಿ ಈವರೆಗೂ ಉಳಿದಿದ್ದ ಏಕೈಕ ಸಾಕ್ಷಿ.
ಹತ್ಯಾಕಾಂಡದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು. ಆದರೆ, ಆಗಿನ ಬ್ರಿಟಿಷ್ ಸರ್ಕಾರ 670 ಮಂದಿ ಮೃತಪಟ್ಟಿದ್ದಾರೆ ಎಂದು ಲೆಕ್ಕ ನೀಡಿತ್ತು. ಮಂತ್ರ, ವೇದ ಘೋಷಗಳು ಗೊತ್ತಿದ್ದರಿಂದ ಮೃತಪಟ್ಟ ಅಷ್ಟೂ ಮಂದಿಗೆ ನದಿ ದಡದಲ್ಲಿ ಅಂತ್ಯ ಸಂಸ್ಕಾರ ಮಾಡಲು ಗಾಂಧೀಜಿ ಯವರು ಸುಧಾಕರ್ ಚತುರ್ವೇದಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಮೂಹಿಕ ಅಂತ್ಯ ಸಂಸ್ಕಾರ ಕೂಡ ನಡೆದಿತ್ತು.








