ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜಧಾನಿ ಬೆಂಗಳೂರು ನಗರದಲ್ಲಿ ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ನಾಳೆ (ಶನಿವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ನಗರದಲ್ಲಿ ಲಾಕ್‍ಡೌನ್ ಜಾರಿಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಲಾಕ್‍ಡೌನ್ ಸಮಯದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಬೆಂಗಳೂರು ನಗರದ ಜನರು ಈಗಾಗಲೇ ಲಾಕ್‍ಡೌನ್‍ಗಳನ್ನು ನೋಡಿದ್ದಾರೆ. ಅವರಿಗೆ ಈ ಲಾಕ್‍ಡೌನ್ ಹೊಸದಲ್ಲ. ಲಾಕ್‍ಡೌನ್ ಭದ್ರತೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಬಾರದು ಎಂದು ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳು, ತರಕಾರಿ, ದಿನಸಿ ಅಂಗಡಿಗಳು ಯಥಾಪ್ರಕಾರ ಇರಲಿವೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ತೆರೆದಿರಲಿವೆ. ಹೋಟೆಲ್‍ಗಳೂ ಇರಲಿದ್ದು, ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಮಾಂಸದ ಅಂಗಡಿಗಳಿಗೂ ಅವಕಾಶ ನೀಡಲಾಗಿದೆ ಎಂದು ಭಾಸ್ಕರ್ ರಾವ್ ವಿವರ ನೀಡಿದ್ದಾರೆ.