ಸುನೀಲ್ ಗವಾಸ್ಕರ್ ನಾನು ಕಂಡ ಕೆಟ್ಟ ಆಟಗಾರ… ಆದ್ರೆ ಅದು ಅಲ್ಲಿ ಮಾತ್ರ…!
ಸುನೀಲ್ ಗವಾಸ್ಕರ್… ವಿಶ್ವ ಕ್ರಿಕೆಟ್ ನ ಅದ್ಭುತ ಹಾಗೂ ಶ್ರೇಷ್ಠ ಆಟಗಾರ. ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ದಾಖಲಿಸಿದ್ದ ವಿಶ್ವದ ಮೊದಲ ಬ್ಯಾಟ್ಸ್ ಮೆನ್. 70-80ರ ದಶಕದಲ್ಲಿ ವಿಶ್ವದ ಮಾರಕ ಬೌಲರ್‍ಗಳ ಎದುರು ಸರಾಗವಾಗಿ ರನ್ ದಾಖಲಿಸುತ್ತಿದ್ದ ಸುನೀಲ್ ಗವಾಸ್ಕರ್ ಮಾಡಿರುವ ಸಾಧನೆ ಅಂತಿಂಥದ್ದಲ್ಲ.
ಆದ್ರೆ ಕಿರಣ್ ಮೋರೆಗೆ ಮಾತ್ರ ಸುನೀಲ್ ಗವಾಸ್ಕರ್ ಕೆಟ್ಟ ಆಟಗಾರನಂತೆ. ಇದು ಅಚ್ಚರಿಯಾದ್ರೂ ಸತ್ಯ. ಸುನೀಲ್ ಗವಾಸ್ಕರ್ ಮತ್ತು ಕಿರಣ್ ಮೋರೆ ನಾಲ್ಕೈದು ವರ್ಷ ಭಾರತ ತಂಡದ ಪರ ಜೊತೆಯಾಗಿಯೇ ಆಡಿದ್ದಾರೆ. ಈ ಸಂದರ್ಭದಲ್ಲಿ ಗವಾಸ್ಕರ್ ಅವರನ್ನು ಬಹಳ ಸನೀಹದಿಂದ ಕಿರಣ್ ಮೋರೆ ನೋಡಿದ್ದಾರೆ. ಹಾಗಿದ್ರೆ ವಿಶ್ವದ ಶ್ರೇಷ್ಠ ಆಟಗಾರನಾಗಿದ್ದ ಗವಾಸ್ಕರ್ ವಿರುದ್ಧ ಕಿರಣ್ ಮೋರೆ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಕಾರಣ ಏನು ?
ಇದಕ್ಕೆ ಉತ್ತರ ತುಂಬಾನೇ ಸಿಂಪಲ್. ಸುನೀಲ್ ಗವಾಸ್ಕರ್ ಅವರು ಮೈದಾನದಲ್ಲಿ ಅದ್ಭುತ ಆಟಗಾರನಾಗಿದ್ದರು. ಆದ್ರೆ ನೆಟ್ಸ್ ನಲ್ಲಿ ಮಾತ್ರ ತುಂಬಾ ಕೆಟ್ಟ ಆಟಗಾರನಾಗಿರುತ್ತಿದ್ದರು. ಇದಕ್ಕಾಗಿ ಕಿರಣ್ ಮೋರೆ ಅವರು ಗವಾಸ್ಕರ್ ನಾನು ಕಂಡ ಕೆಟ್ಟ ಆಟಗಾರ. ಅದು ನೆಟ್ಸ್ ನಲ್ಲಿ ಮಾತ್ರ ಅಂತ ಹೇಳಿದ್ದಾರೆ. ಯಾಕಂದ್ರೆ ಸುನೀಲ್ ಗವಾಸ್ಕರ್ ನೆಟ್ಸ್ ನಲ್ಲಿ ಅಷ್ಟೊಂದು ಅಭ್ಯಾಸ ಮಾಡುತ್ತಿರಲಿಲ್ಲ. ಅವರು ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ನೋಡಿದಾಗ ಇವರು ನಾಳೆಯ
ಪಂದ್ಯದಲ್ಲಿ ಹೇಗೆ ಆಡ್ತಾರೆ ಅನ್ನೋ ಅನುಮಾನ ಕೂಡ ಮೂಡುತ್ತಿತ್ತು. ಆದ್ರೆ ಪಂದ್ಯಕ್ಕೆ ಅವರು ಸನ್ನದ್ಧರಾಗುತ್ತಿದ್ದ ರೀತಿ ಮಾತ್ರ ಅದ್ಭುತವಾಗಿರುತ್ತಿತ್ತು. ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದಾಗ ಅವರು ಏನು ರನ್ ಗಳಿಸುತ್ತಾರೋ ಅನ್ನೋ ಸಂದೇಹ ಮೂಡುತ್ತಿತ್ತು. ಆದ್ರೆ ಪಂದ್ಯದಲ್ಲಿ ಮಾತ್ರ ಎಲ್ಲರೂ ವಾಹ್ವ್ ಅನ್ನೋ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ರನ್ ಕೂಡ ಗಳಿಸುತ್ತಿದ್ದರು ಅಂತ ಕಿರಣ್ ಮೋರೆ ಹೇಳಿದ್ದಾರೆ.
ಸುನೀಲ್ ಗವಾಸ್ಕರ್ ರನ್ ಗಳಿಸುತ್ತಿದ್ದ ರೀತಿ ಮತ್ತು ಶತಕ ದಾಖಲಿಸುತ್ತಿದ್ದ ಪರಿ ಅದ್ಭುತವಾಗಿರುತ್ತಿತ್ತು. ಏಕಾಗ್ರತೆ ಅವರ ಹಿಂದಿನ ಶಕ್ತಿಯಾಗಿತ್ತು. ಏಕಾಗ್ರತೆಯಿಂದ ಆಡುತ್ತಿದ್ದ ಗವಾಸ್ಕರ್, ವಿಂಡೀಸ್ ಮತ್ತು ಆಸ್ಟ್ರೇಲಿಯಾದ ಮಾರಕ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಮಾರಕ ಬೌಲಿಂಗ್ ದಾಳಿಯ ಎದುರಿಗೂ ಅವರು ಹೆಲ್ಮೇಟ್ ಧರಿಸುತ್ತಿರಲಿಲ್ಲ. ಗವಾಸ್ಕರ್ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ್ರೆ ಆ ನಂತರ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಕಿರಣ್ ಮೋರೆ ಅಭಿಪ್ರಾಯ ಪಟ್ಟಿದ್ದಾರೆ.
ಸುನೀಲ್ ಗವಾಸ್ಕರ್ ಅವರಲ್ಲಿರುವ ಏಕಾಗ್ರತೆ ಅದು ದೇವರ ವರ ಪ್ರಸಾದ. ಅವರ ಏಕಾಗ್ರತೆಯನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಟಿಂಗ್ ಮೇಲೆ ಲಯಕಂಡುಕೊಂಡ ನಂತರ ಅವರ ಸನೀಹಕ್ಕೆ ಯಾರು ಬರಲು ಸಾಧ್ಯವಿಲ್ಲ. ಹಾಗೇ ಅವರ ಎದುರು ನೀವು ನೃತ್ಯ ಮಾಡಿ, ಎಷ್ಟೇ ಮಾತನಾಡಿ, ಅವರು ಅವರದ್ದೇ ಲೋಕದಲ್ಲಿ ಇರುತ್ತಿದ್ದರು. ಅವರು ಕ್ರಿಕೆಟ್ ಮೇಲೆ ಮಾತ್ರ ಏಕಾಗ್ರತೆ ಕಾಯ್ದುಕೊಳ್ಳುತ್ತಿದ್ದರು ಅಂತ ಕಿರಣ್ ಮೋರೆ ಗವಾಸ್ಕರ್ ಅವರ ಏಕಾಗ್ರತೆಯನ್ನು ಬಣ್ಣನೆ ಮಾಡಿದ್ದಾರೆ.
ಸುನೀಲ್ ಗವಾಸ್ಕರ್ ಅವರು ತುಂಬಾನೇ ಶಿಸ್ತಿನ ಆಟಗಾರ. ನಾನು ಅವರನ್ನು ತುಂಬಾನೇ ಹತ್ತಿರದಿಂದ ಬಲ್ಲೆ. ಭಾರತ ತಂಡದ ಪರ ಹಾಗೂ ದೇಶಿ ಕ್ರಿಕೆಟ್ ನಲ್ಲಿ ಪಶ್ಚಿಮ ವಲಯದ ಪರ ಸಾಕಷ್ಟು ಪಂದ್ಯಗಳನ್ನು ಜೊತೆಯಾಗಿಯೇ ಆಡಿದ್ದೇವೆ. ನನಗಿನ್ನೂ ನೆನಪಿದೆ. ವಾಂಖೇಡೆ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಆ ಪಂದ್ಯದಲ್ಲಿ ಅವರು 30/40 ರನ್‍ಗೆ ಔಟಾಗಿದ್ದರು. ಅವರು ಪೆವಿಲಿಯನ್‍ಗೆ ಹಿಂತಿರುಗಿದ್ದಾಗ ಡ್ರೆಸಿಂಗ್ ರೂಂನಲ್ಲಿ ಯಾರು ಇರಲಿಲ್ಲ. ಡ್ರೆಸಿಂಗ್ ರೂಂನ ಮೂಲೆ ಮೂಲೆಯಲ್ಲಿ ಆಟಗಾರರು ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂಬುದನ್ನು ಕಿರಣ್ ಮೋರೆ ನೆನಪಿಸಿಕೊಂಡಿದ್ದಾರೆ.
ಔಟಾಗಿ ಸೀದಾ ಡ್ರೆಸಿಂಗ್ ರೂಂಗೆ ಬಂದ ಗವಾಸ್ಕರ್ ಕೈಯ ಗ್ಲೌಸ್ ಅನ್ನು ಎತ್ತಿ ಬಿಸಾಡಿದ್ದರು. ಅಲ್ಲದೆ 30/40 ರನ್‍ಗೆ ಔಟಾಗಿದ್ದಕ್ಕೆ ತುಂಬಾನೇ ಸಿಟ್ಟು ಮಾಡಿಕೊಂಡಿದ್ದರು. ಸಾಮಾನ್ಯವಾಗಿ ಅವರು ಆ ರೀತಿ ಮಾಡುತ್ತಿರಲಿಲ್ಲ. ಯಾಕಂದ್ರೆ ಡಕೌಟ್ ಅಥವಾ 5 ಅಥವಾ 10 ರನ್‍ಗೆ ಔಟಾಗಿದ್ದರೂ ಸುಮ್ಮನೆ ಇರುತ್ತಿದ್ದರು. ಆದ್ರೆ ಮೈದಾನದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಆಡಿ ಔಟಾದ್ರೆ ಅದನ್ನು ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಹಾಗೇ ನಾನು ಹೇಗೆ ಔಟಾದ್ರೆ ಎಂಬುದನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದರು. ಆದ್ರೆ ಸುನೀಲ್ ಗವಾಸ್ಕರ್ ಅವರನ್ನು ಡ್ರೆಸಿಂಗ್ ರೂಂನಲ್ಲಿ ತುಂಬಾನೇ ಗೌರವದಿಂದಲೇ ಸಹ ಆಟಗಾರರು ನೋಡುತ್ತಿದ್ದರು ಎಂಬುದನ್ನು ಸಹ ಕಿರಣ್ ಮೋರೆ ಹೇಳಿಕೊಂಡಿದ್ದಾರೆ.








