ರಾಜಸ್ತಾನದ ರಾಜಕೀಯದಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗಾಗಲೇ ಸಚಿನ್ ಪೈಲೆಟ್ ಸೇರಿದಂತೆ 19 ಸಾಸಕರನ್ನು ಸ್ಪೀಕರ್ ಸಿ ಪಿ ಜೋಶಿಯವರು ಅನರ್ಹಗೊಳಿಸಿದ್ದಾರೆ. ಆದ್ರೆ ತಮ್ಮ ಅನರ್ಹತೆ ಪ್ರಶ್ನಿಸಿ ರೆಬಲ್ ಶಾಸಕರು ರಾಜಸ್ತಾನ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಈ ಪ್ರಕರಣ ಹೈಕೋರ್ಟ್ ಅಂಗಳದಲ್ಲಿರುವಾಗಲೇ ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡು ತೀರ್ಪು ನೀಡುವಲ್ಲಿ ವಿಳಂಬ ಮಾಡುತ್ತಿದೆ, ಇದು ಸಾಂವಿಧಾನಿಕವಾಗಿ ಸರಿಯಲ್ಲ ಎಂದು ಹೇಳಿ ನಿನ್ನೆ ಸ್ಪೀಕರ್ ಸಿ ಪಿ ಜೋಶಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು ತುರ್ತು ವಿಚಾರಣೆಯನ್ನು ಕೈಗೆತ್ತುಕೊಂಡ ಸುಪ್ರೀಂ ಸರ್ಕಾರದಲ್ಲಿ ಏನೇ ರಾಜಕೀಯ ಬೆಳವಣಿಗೆಗಳು ನಡೆದರೂ ಸಭಾಧ್ಯಕ್ಷರು ತಟಸ್ಥವಾಗಿರಬೇಕು, ಇಲ್ಲಿ ನೀವೇಕೆ ಕೋರ್ಟ್ ಗೆ ತಂದಿದ್ದೀರಿ ಕೇವಲ ಒಂದು ದಿನದಲ್ಲಿ ರಾಜಸ್ತಾನ ಹೈಕೋರ್ಟ್ ತೀರ್ಪು ನೀಡುತ್ತದೆ, ನೀವ್ಯಾಕೆ ಕಾಯಬಾರದು ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ವಿಚಾರನೆ ನಡೆಸಿದ್ದು, ಈ ಶಾಸಕರು ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು, ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಭಿನ್ನಮತ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಸರ್ಕಾರದ ವಿರುದ್ಧ ಬಂಡೆದ್ದರುವ 19 ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.








