ನವದೆಹಲಿ : ಮಾಜಿ ಸಚಿವ ಜನಾರ್ದನ ರೆಡ್ಡಿಗೆ 2 ದಿನಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಸಚಿವ ಶ್ರೀರಾಮುಲು ತಾಯಿಯ ಪುಣ್ಯ ತಿಥಿಯಲ್ಲಿ ಪಾಲ್ಗೊಳ್ಳಲು ಆಗಸ್ಟ್ 30 ಮತ್ತು 31 ರಂದು ಬಳ್ಳಾರಿಗೆ ತೆರಳಲು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮತ್ತು ನ್ಯಾ.ಬಿ.ಆರ್ ಗವಾಯಿ ಮತ್ತು ನ್ಯಾ.ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಜನಾರ್ದನ ರೆಡ್ಡಿ ಬಳ್ಳಾರಿಗೆ ತೆರಳಲು ಅನುಮತಿ ನೀಡಿದೆ. ಈ ಹಿಂದೆ ರೆಡ್ಡಿ ಜಾಮೀನು ಪಡೆದ ವೇಳೆ ಬಳ್ಳಾರಿಗೆ ತೆರಳದಂತೆ ಕೋರ್ಟ್ ಷರತ್ತು ವಿಧಿಸಿತ್ತು.
ಸದ್ಯ ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ಶ್ರೀರಾಮುಲು ಅವರ ತಾಯಿ ನಿಧನರಾದ ಸಂದರ್ಭದಲ್ಲಿ ಸಂತಾಪ ಸೂಚಿಸಿ ಕಣ್ಣೀರಿಟ್ಟಿದ್ದರು. ಇಂತಹ ಸಂದರ್ಭದಲ್ಲಿಯೂ ಕಾನೂನು ನನ್ನನ್ನು ಕಟ್ಟಿಹಾಕಿದೆ. ಜೀವದ ಗೆಳೆಯ ಶ್ರೀರಾಮುಲುಗೆ ಹೇಗೆ ಸಂತೈಸಲಿ, ತಾಯಿಯ ಅಗಲಿಕೆಯ ದುಃಖ ತಡೆಯಲಾಗುತ್ತಿಲ್ಲ. ವಿಡಿಯೋ ಕರೆಯ ಮೂಲಕ ತಾಯಿಯ ದರ್ಶನವನ್ನು ಪಡೆದುಕೊಳ್ಳುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದರು.