ನವದೆಹಲಿ: ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಆಘಾತಕಾರಿ ತೀರ್ಪೊಂದನ್ನು ನೀಡಿದೆ. ಸೇವಾವಧಿಯಲ್ಲಿ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವ ಸರ್ಕಾರಿ ನೌಕರರು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ಅಡಿಯಲ್ಲಿ ಪಿಂಚಣಿ ಸೌಲಭ್ಯಗಳಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಡಿಸೆಂಬರ್ 9) ಸ್ಪಷ್ಟಪಡಿಸಿದೆ.
ಉದ್ಯೋಗಿಯೊಬ್ಬರು ಸೇವೆಗೆ ರಾಜೀನಾಮೆ ನೀಡಿದ ತಕ್ಷಣ, ಅವರ ಹಿಂದಿನ ಸೇವೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹೀಗಾಗಿ ಅವರು ಯಾವುದೇ ಪಿಂಚಣಿಗೆ ಅರ್ಹರಾಗಿರುವುದಿಲ್ಲ ಎಂದು ನ್ಯಾಯಾಲಯ ಕಡಕ್ ಆಗಿ ನುಡಿದಿದೆ.
ಪ್ರಕರಣದ ಹಿನ್ನೆಲೆ ಏನು
ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಮಾಜಿ ಕಂಡಕ್ಟರ್ ಒಬ್ಬರ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. 1985ರಲ್ಲಿ ನೇಮಕಗೊಂಡಿದ್ದ ಉದ್ಯೋಗಿ ಸುಮಾರು 30 ವರ್ಷಗಳ ಸುದೀರ್ಘ ಸೇವೆಯ ನಂತರ 2014ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗಸ್ಟ್ 7, 2014 ರಂದು ಅವರು ನೀಡಿದ ರಾಜೀನಾಮೆಯನ್ನು ಸೆಪ್ಟೆಂಬರ್ 19, 2014 ರಂದು ಸಕ್ಷಮ ಪ್ರಾಧಿಕಾರ ಅಂಗೀಕರಿಸಿತ್ತು.
ನಂತರದ ದಿನಗಳಲ್ಲಿ ಉದ್ಯೋಗಿಯು ತಮ್ಮ ರಾಜೀನಾಮೆಯನ್ನು ಹಿಂಪಡೆಯಲು ಮನವಿ ಮಾಡಿದ್ದರೂ, ಅದನ್ನು ತಿರಸ್ಕರಿಸಲಾಗಿತ್ತು. ತದನಂತರ ಪಿಂಚಣಿ ಸೌಲಭ್ಯಕ್ಕಾಗಿ ಅವರ ಕಾನೂನುಬದ್ಧ ವಾರಸುದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮ ತಂದೆಯ ರಾಜೀನಾಮೆಯನ್ನು ಸ್ವಯಂಪ್ರೇರಿತ ನಿವೃತ್ತಿ (VRS) ಎಂದು ಪರಿಗಣಿಸಬೇಕು ಎಂದು ವಾದಿಸಿದ್ದರು.
ರಾಜೀನಾಮೆ ಮತ್ತು ನಿವೃತ್ತಿ ಒಂದೇ ಅಲ್ಲ
ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠವು, ರಾಜೀನಾಮೆ ಮತ್ತು ಸ್ವಯಂಪ್ರೇರಿತ ನಿವೃತ್ತಿ ಎಂಬುದು ಎರಡು ವಿಭಿನ್ನ ಪರಿಕಲ್ಪನೆಗಳು ಎಂದು ಸ್ಪಷ್ಟಪಡಿಸಿದೆ.
ತೀರ್ಪು ನೀಡುವಾಗ ನ್ಯಾಯಮೂರ್ತಿ ಬಿಂದಾಲ್ ಅವರು, 1972ರ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ನಿಯಮ 26 ಅನ್ನು ಉಲ್ಲೇಖಿಸಿದ್ದಾರೆ. ಈ ನಿಯಮದ ಪ್ರಕಾರ, ಸರ್ಕಾರಿ ನೌಕರನು ಸೇವೆಯ ರಾಜೀನಾಮೆ ನೀಡಿದರೆ, ಆತನ ಹಿಂದಿನ ಸೇವೆಯು ಮುಟ್ಟುಗೋಲು ಹಾಕಲ್ಪಡುತ್ತದೆ. ಹಿಂದಿನ ಸೇವೆ ರದ್ದಾಗುವುದರಿಂದ ಸಹಜವಾಗಿಯೇ ನೌಕರನು ಪಿಂಚಣಿಗೆ ಅನರ್ಹನಾಗುತ್ತಾನೆ ಎಂದು ನ್ಯಾಯಾಲಯ ಹೇಳಿದೆ.
ಪಿಂಚಣಿ ಸೌಲಭ್ಯ ಸಿಗುವುದಿಲ್ಲ
ರಾಜೀನಾಮೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಮತ್ತು ಅದನ್ನು ಸ್ವಯಂಪ್ರೇರಿತ ನಿವೃತ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಪರಿಣಾಮವಾಗಿ, ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರೂ, ರಾಜೀನಾಮೆ ನೀಡಿದ ಕಾರಣಕ್ಕಾಗಿ ಡಿಟಿಸಿ ಉದ್ಯೋಗಿಯ ಕುಟುಂಬಕ್ಕೆ ಪಿಂಚಣಿ ನಿರಾಕರಿಸಿದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಈ ತೀರ್ಪು ಸೇವೆಯಿಂದ ಮಧ್ಯದಲ್ಲೇ ರಾಜೀನಾಮೆ ನೀಡಲು ಬಯಸುವ ಸರ್ಕಾರಿ ನೌಕರರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ರಾಜೀನಾಮೆ ನೀಡುವ ಮುನ್ನ ಪಿಂಚಣಿ ಸೌಲಭ್ಯಗಳ ಬಗ್ಗೆ ಎಚ್ಚರ ವಹಿಸಬೇಕೆಂಬ ಸಂದೇಶವನ್ನು ರವಾನಿಸಿದೆ.








