ನವದೆಹಲಿ:ಮಾರ್ಚ್ ನಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಿದ್ದ ಕೇಂದ್ರ ಸರ್ಕಾರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸ್ಪಷ್ಟ ನಿಲುವು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದ ಕೇಂದ್ರ ಸರ್ಕಾರವೇ ಪರಿಹಾರವನ್ನು ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಾರ್ಚ್ ನಿಂದ ಆಗಸ್ಟ್ ಅಂತ್ಯದವರೆಗಿನ ಸಾಲ ಮರುಪಾವತಿಯ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತಾಗಿ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳಬೇಕು. ಸೆಪ್ಟೆಂಬರ್ 1ರ ಒಳಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದರಿಂದ ಆ ಸಮಯದಲ್ಲಿನ ಸಾಲದ ಮರುಪಾವತಿ ಮೇಲಿನ ಹೆಚ್ಚುವರಿ ಬಡ್ಡಿದರವನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಕೇಂದ್ರ ಸರ್ಕಾರ ಸೆಪ್ಟೆಂಬರ್ 1ರಂದು ಸ್ಪಷ್ಟವಾದ ನಿಲುವು ಪ್ರಕಟಿಸಬೇಕೆಂದು ಸೂಚಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸದಿದ್ದರೆ, ತಮ್ಮ ವಿಶೇಷ ಅಧಿಕಾರ ಉಪಯೋಗಿಸಿಕೊಂಡು ಇದು ಪ್ರಕೃತಿ ವಿಕೋಪದಡಿ ಸಂಭವಿಸಿದ ಹಾನಿ ಎಂದು ಬಡ್ಡಿ ಮನ್ನಾ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನೈಸರ್ಗಿಕ ವಿಕೋಪ ಎಂದು ತಿಳಿದು ಪರಿಹಾರ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
![]()
ಅಲ್ಲದೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ದೇಶವನ್ನೇ ಲಾಕ್ ಡೌನ್ ಮಾಡಿದ ನೀವೇ ಪರಿಹಾರ ಕೊಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಜಸ್ಟೀಸ್ ಅಶೋಕ್ ಭೂಷಣ್ ಅವರಿದ್ದ ಪೀಠ ಕೇಂದ್ರಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದೆ.









