Hijab: ಹಿಜಾಬ್ ನಿಷೇಧ ಮೇಲ್ಮನವಿ, ಅರ್ಜಿದಾರರ ವಿರುದ್ಧ ಸುಪ್ರೀಂ ಗರಂ
ದೇಶಾದ್ಯಂತ ಸದ್ದು ಮಾಡಿದ್ದ ಶಾಲಾ-ಕಾಲೇಜು ತರಗತಿಗಳಲ್ಲಿ ಹಿಜಬ್ ನಿಷೇಧ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರ ಮತ್ತು ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ಮುಂದೂಡುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನ ನಿರಾಕರಿಸಿದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 5 ಕ್ಕೆ ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.
ಹಿಜಾಬ್ ಧರಿಸುವುದು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ರಕ್ಷಿಸಬಹುದಾದ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.
ನ್ಯಾ. ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿ ವಿಚಾರಣೆ ಮುಂದೂಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಈ ವೇಳೆ ಅರ್ಜಿದಾರರ ವಿರುದ್ಧ ಗರಂ ಆದ ನ್ಯಾ. ಹೇಮಂತ್ ಗುಪ್ತಾ, ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಚಾರಣೆ ನಡೆಸಲು ಸಾಧ್ಯವಿಲ್ಲ, ಇದು ಫೋರಂ ಶಾಪಿಂಗ್ ಅಲ್ಲ. ಸೆಪ್ಟೆಂಬರ್ 5 ರಂದು ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಉತ್ತರಿಸಬೇಕು ಎಂದು ಸೂಚಿಸಿ ರಾಜ್ಯ ಸರ್ಕಾರ ಮತ್ತು ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ.








