ದೆಹಲಿಯಲ್ಲಿ ಪಟಾಕಿ ನಿಷೇಧ ಹಿಂಪಡೆಯಲು ನಿರಾಕರಿಸಿದ ಸುಪ್ರೀಂ ಕೋರ್ಟ್….
ದೆಹಲಿಯಲ್ಲಿ ಪಟಾಕಿ ನಿಷೇಧವನ್ನ ಹಿಂಪಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ನಿಷೇಧವನ್ನು ನಾವು ಹಿಂತೆಗೆದುಕೊಳ್ಳುವುದಿಲ್ಲ. ನಮ್ಮ ಆದೇಶ ಅತ್ಯಂತ ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೋಮವಾರ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಹಬ್ಬದ ಸೀಸನ್ಗಳಲ್ಲಿ ಪಟಾಕಿಗಳ ಮಾರಾಟ ಮತ್ತು ಖರೀದಿ ಮತ್ತು ಬಳಕೆಯನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ದೆಹಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಅರ್ಜಿಯ ವಿಚಾರಣೆಯ ವೇಳೆ “ನ್ಯಾಯಾಲಯವು ಈಗಾಗಲೇ ವಿವರವಾದ ಆದೇಶವನ್ನು ನೀಡಿದೆ. ಪಟಾಕಿಗಳ ಬಳಕೆಗೆ ಮತ್ತು ಹಿಂದಿನ ಆದೇಶವನ್ನು ತೆರವು ಮಾಡುವುದಿಲ್ಲ” ಎಂದು ಸ್ಪಷ್ಟ ಪಡಿಸಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ನಮ್ಮ ಆದೇಶವು ಅತ್ಯಂತ ಸ್ಪಷ್ಟವಾಗಿದೆ. ಹಸಿರು ಪಟಾಕಿಗಳಿದ್ದರೂ ಪಟಾಕಿಗಳಿಗೆ ಹೇಗೆ ಅವಕಾಶ ನೀಡುತ್ತೇವೆ. ದೆಹಲಿಯ ಮಾಲಿನ್ಯವನ್ನು ನೀವು ನೋಡಿದ್ದೀರಾ ಎಂದು ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ಆರ್ ಶಾ ನೇತೃತ್ವದ ಪೀಠ, “ದೀಪಾವಳಿಯ ನಂತರ ದೆಹಲಿ ಎನ್ಸಿಆರ್ನ ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಡುತ್ತದೆ. ಪರಿಸ್ಥಿತಿ ಕೆಟ್ಟದಾಗುತ್ತದೆ” ಎಂದು ಹೇಳಿದ್ದಾರೆ.
Supreme Court refuses to lift ban on firecrackers in Delhi