ದೇಶದ ಅಗ್ರ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಿನಿಮಾ ಟಿಕೆಟ್ ದರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚುತ್ತಿರುವ ಟಿಕೆಟ್ ದರದ ಬಗ್ಗೆ ಕಿಡಿಕಾರಿದೆ.
ನೀವು ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಸಿನಿಮಾ ನೋಡಲು ₹700 ಟಿಕೆಟ್ ದರ ನಿಗದಿ ಮಾಡುತ್ತೀರಿ. ಅದರ ಮೇಲೂ ₹100 ನೀರಿಗೆ ಚಾರ್ಜ್ ಮಾಡುತ್ತೀರಿ! ಹೀಗೆ ಜನರ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದ್ದೀರಿ. ಈ ರೀತಿಯ ದರ ನಿಗದಿ ಮುಂದುವರಿದರೆ, ಜನರು ಥಿಯೇಟರ್‌ಗಳಿಗೆ ಹೋಗುವುದೇ ನಿಲ್ಲಿಸುತ್ತಾರೆ, ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್‌ನ ಈ ಟೀಕೆ ಸಾಮಾನ್ಯ ಪ್ರೇಕ್ಷಕರ ಭಾವನೆಗಳನ್ನು ಪ್ರತಿಬಿಂಬಿಸಿದೆ. ಟಿಕೆಟ್ ದರ, ಪಾರ್ಕಿಂಗ್ ಶುಲ್ಕ, ಆಹಾರ-ಪಾನೀಯಗಳ ದರ ಸೇರಿದಂತೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದು ಸಾಮಾನ್ಯ ಕುಟುಂಬಕ್ಕೆ ದುಬಾರಿಯಾಗಿದೆ.
ಬೆಲೆ ನಿಯಂತ್ರಣದ ಅಗತ್ಯ:
ನ್ಯಾಯಮೂರ್ತಿಗಳು ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ನಿಯಂತ್ರಣ ಇರಬೇಕು. ರಾಜ್ಯ ಸರ್ಕಾರಗಳು ಅಥವಾ ಸಂಬಂಧಿತ ನಿಯಂತ್ರಣ ಸಂಸ್ಥೆಗಳು ಇದಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಚಿತ್ರಮಂದಿರಗಳು ಖಾಲಿಯಾಗುತ್ತವೆ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಚಿತ್ರರಂಗದ ಪ್ರತಿಕ್ರಿಯೆ:
ಫಿಲ್ಮ್ ಅಸೋಸಿಯೇಶನ್ ಸದಸ್ಯರು, ಮಲ್ಟಿಪ್ಲೆಕ್ಸ್‌ಗಳ ನಿರ್ವಹಣಾ ವೆಚ್ಚ, ತೆರಿಗೆ, ತಂತ್ರಜ್ಞಾನ ನವೀಕರಣ ಮುಂತಾದ ಕಾರಣಗಳಿಂದ ದರ ಸ್ವಲ್ಪ ಹೆಚ್ಚು ಇರಬಹುದು. ಆದರೆ ನ್ಯಾಯಮೂರ್ತಿಗಳ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ಪ್ರೇಕ್ಷಕರ ಅನುಕೂಲಕ್ಕಾಗಿ ಸಮತೋಲನದ ದರ ನಿಗದಿ ಮಾಡುವ ವಿಚಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪ್ರೇಕ್ಷಕರ ಸಂಖ್ಯೆ ಇಳಿಕೆ:
ಇತ್ತೀಚಿನ ವರ್ಷಗಳಲ್ಲಿ OTT ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯಿಂದ, ಮನೆಬಿಟ್ಟು ಥಿಯೇಟರ್‌ಗೆ ಹೋಗುವವರ ಸಂಖ್ಯೆ ಇಳಿಯುತ್ತಿದೆ. ಈಗ ಸುಪ್ರೀಂ ಕೋರ್ಟ್ ಸೂಚಿಸಿದಂತೆ, ಟಿಕೆಟ್ ದರ ಕಡಿಮೆ ಮಾಡಿದರೆ ಮತ್ತೆ ಜನರು ಚಿತ್ರಮಂದಿರಗಳಿಗೆ ವಾಪಸು ಬರಬಹುದು ಎಂಬ ನಿರೀಕ್ಷೆಯೂ ಇದೆ.








