ಅಹಮದಾಬಾದ್: ಕಾಲ ಕಾಲಕ್ಕೆ ಟ್ರೆಡಿಂಗ್ ಬದಲಾದಂತೆ ವಿನ್ಯಾಸಕಾರರ ಕಲ್ಪನೆಗಳೂ ಬದಲಾಗುತ್ತಾ ಹೋಗುತ್ತವೆ. ಈಗ ದೇಶವೇಕೆ, ಇಡೀ ವಿಶ್ವದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಮುಖದ ಸೌಂದರ್ಯದ ಬದಲು ಜೀವ ಉಳಿಸಿಕೊಳ್ಳಬೇಕೆಂದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಚಿನ್ನದ ವ್ಯಾಪಾರಿಯೊಬ್ಬ ಚಿನ್ನದ ಮಾಸ್ಕ್ ತಯಾರಿಸಿ ಟ್ರೆಂಡಿಂಗ್ ಸೃಷ್ಟಿಸಿದ್ದರು. ಇದೀಗ ಗುಜರಾತ್‍ನ ಸೂರತ್‍ನಲ್ಲಿರುವ ವಜ್ರದ ವ್ಯಾಪಾರಿಯೊಬ್ಬರು ವಜ್ರದ ಹರಳುಗಳಿಂದ ಅಲಂಕೃತ ಫೇಸ್ ಮಾಸ್ಕ್ ತಯಾರಿಸಿದ್ದರೆ. ಇದರ ಬೆಲೆ ಬರೋಬ್ಬರಿ 4 ಲಕ್ಷ.
ಸೂರತ್‍ನ ವಜ್ರದ ವ್ಯಾಪಾರಿ ದೀಪಕ್ ಚೋಕ್ಸಿ, ಗ್ರಾಹಕರ ಒತ್ತಾಸೆಯ ಮೇರೆಗೆ ವಜ್ರದ ಮಾಸ್ಕ್ ತಯಾರಿಸಿದ್ದಾರೆ. ಇತ್ತೀಚೆಗೆ ಬಂದ ಗ್ರಾಹಕರೊಬ್ಬರು ತಮ್ಮ ಮದುವೆಗೆ ವಿಶೇಷ ಆಕರ್ಷಣೆಯಾಗಿ ವಜ್ರದ ಮಾಸ್ಕ್ ತಯಾರಿಸಿ ಕೊಡುವಂತೆ ಕೇಳಿದರು. ವಿನ್ಯಾಸಕಾರರ ಜತೆ ಚರ್ಚಿಸಿ ಮಾಸ್ಕ್ ಮೇಲೆ ವಜ್ರದ ಮಣಿ ಹಾರದಿಂದ ಅಲಂಕಾರ ಮಾಡಲಾಯಿತು. ಈ ವಜ್ರದ ಮಾಸ್ಕ್ ನೋಡಿದ ಮೇಲೆ ಮತ್ತೆ ಕೆಲವರು ತಮಗೂ ಮಾಡಿಕೊಡಿ ಎಂದು ಆರ್ಡರ್ ಮಾಡಿದ್ದಾರೆ ಎನ್ನುತ್ತಾರೆ.
ಲಾಕ್‍ಡೌನ್ ಸಡಿಲಿಕೆ ಬಳಿಕ ದೀಪಕ್ ಚೋಕ್ಸಿ ಚಿನ್ನ, ವಜ್ರ, ಬೆಳ್ಳಿ ಹಾಗೂ ಅಮೆರಿಕನ್ ಡೈಮಂಡ್ ಮಾಸ್ಕ್‍ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಪುಣೆಯಲ್ಲಿ ತಯಾರಾದ ಚಿನ್ನದ ಮಾಸ್ಕ್ ಬೆಲೆ 2.89 ಲಕ್ಷ. ಆದರೆ, ವಜ್ರದ ಮಾಸ್ಕ್ ದುಬಾರಿಯಾಗಿದ್ದು 4 ಲಕ್ಷ ಬೆಲೆ ನಿಗಧಿಪಡಿಸಲಾಗಿದೆ. ಚಿನ್ನದೊಂದಿಗೆ ಅಮೆರಿಕನ್ ಡೈಮಂಡ್ ಮಾಸ್ಕ್ ಬೆಲೆ 1.5 ಲಕ್ಷವಾದರೆ, ಬಿಳಿ ಚಿನ್ನದೊಂದಿಗೆ ವಜ್ರದ ಹರಳು ಅಲಂಕೃತ ಈ ಮಾಸ್ಕ್ ಬೆಲೆ 4 ಲಕ್ಷ. ಈ ಮಾಸ್ಕ್‍ಗಳನ್ನು ನಂತರದ ದಿನಗಳಲ್ಲಿ ನೆಕ್‍ಲೇಸ್ ಅಥವಾ ಬ್ರಾಸ್‍ಲೆಟ್ ಆಗಿ ಪರಿವರ್ತಿಸಿಕೊಳ್ಳಬಹುದು ಎನ್ನುತ್ತಾರೆ ದೀಪಕ್ ಚೋಕ್ಸಿ.
ದುಬಾರಿ ಮಾಸ್ಕ್‍ಗಳ ಬೆಲೆ..
ಸಂಪೂರ್ಣ ಚಿನ್ನದ ಮಾಸ್ಕ್: 2.89 ಲಕ್ಷ (ಪುಣೆ)
ಚಿನ್ನ ಹಾಗೂ ಅಮೆರಿಕನ್ ಡೈಮಂಡ್ ಮಾಸ್ಕ್: 1.50 ಲಕ್ಷ
ಬಿಳಿ ಚಿನ್ನ ಹಾಗೂ ವಜ್ರ ಭರಿತ ಮಾಸ್ಕ್: 4 ಲಕ್ಷ