ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆಗೆ ನಾಲ್ಕು ತಿಂಗಳ ಮೊದಲೇ ಬಿಜೆಪಿಯಲ್ಲಿ ಪ್ಲ್ಯಾನಿಂಗ್ ನಡೆದಿತ್ತಾ ಎಂಬ ವದಂತಿ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ.
ಈ ಸ್ಫೋಟಕ ಸಂಗತಿ ಬಹಿರಂಗಪಡಿಸಿದ್ದಾರೆ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟ ಕೇಂದ್ರ ಸಚಿವ, ಬೆಳಗಾವಿ ಸಂಸದರಾಗಿದ್ದ ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ್ ಪಾಟೀಲ್.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಂಸದರಾಗಿದ್ದ ಸುರೇಶ್ ಅಂಗಡಿಯವರನ್ನು ಕೂರಿಸಲು ಬಿಜೆಪಿ ದೆಹಲಿ ನಾಯಕರು ಒಂದು ಹಂತದ ಸಿದ್ಧತೆಯನ್ನೂ ಮಾಡಿಕೊಂಡಿದ್ದರಂತೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ವದಂತಿಗಳಿಗೆ ಲಿಂಗರಾಜ ಪಾಟೀಲ್ ಹೇಳಿಕೆ ಪುಷ್ಠಿ ನೀಡಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ನೇತೃತ್ವದಲ್ಲಿ ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕರ ಸಭೆ ನಡೆದಿತ್ತಂತೆ. ಸಭೆಗೆ ಸುರೇಶ್ ಅಂಗಡಿಯೂ ಹೋಗಿದ್ರಂತೆ. ಯಡಿಯೂರಪ್ಪ ಜಾಗಕ್ಕೆ ಮುಖ್ಯಮಂತ್ರಿ ಸ್ಥಾನದ ಅಲಂಕರಿಸುವವರ ಪಟ್ಟಿಯಲ್ಲಿ ನನ್ನ ಹೆಸರೇ ಮೊದಲು ಇತ್ತು. ನನಗೂ ಸಿಎಂ ಆಗುವ ಯೋಗ ಬರಬಹುದು, ಆದಕ್ಕಾಗಿ ಸ್ವಲ್ಪ ದಿನ ಕಾಯಬೇಕು ಎಂದು ಸುರೇಶ್ ಅಂಗಡಿ ಆಗಾಗ ಹೇಳಿಕೊಳ್ಳುತ್ತಿದ್ದರು ಎಂದು ಲಿಂಗರಾಜ್ ಪಾಟೀಲ್ ಬಹಿರಂಗಪಡಿಸಿದ್ದಾರೆ.
ಸುರೇಶ್ ಅಂಗಡಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಬಿಜೆಪಿ ನಾಯಕರಿಗೆ ಒಲವು ಇರುವ ಮೊದಲ ಕಾರಣ, ಅವರು ಲಿಂಗಾಯತ ನಾಯಕ. ಉತ್ತರ ಕರ್ನಾಟಕದ ಲಿಂಗಾಯತರ ನಾಯಕಾರಾಗಿ ಬೆಳೆಯಲು ಬಿಎಸ್‍ವೈ ನಂತರ ಸುರೇಶ್ ಅಂಗಡಿಗೆ ಎಲ್ಲಾ ಅರ್ಹತೆಗಳಿವೆ. ಸಜ್ಜನ ಹಾಗೂ ಕಳಂಕ ರಹಿತ ನಾಯಕತ್ವ ಸುರೇಶ್ ಅಂಗಡಿ ಅವರನ್ನು ಸಿಎಂ ಪಟ್ಟಕ್ಕೆ ಕೂರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು ಎನ್ನಲಾಗಿದೆ.
ಒಂದು ವೇಳೆ ಸುರೇಶ್ ಅಂಗಡಿಯವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸಿದರೆ ಲಿಂಗಾಯಿತರು, ಅದರಲ್ಲೂ ಯಡಿಯೂರಪ್ಪ ಅವರ ಬೆನ್ನಿಗಿರುವ ಲಿಂಗಾಯತ ಸಮುದಾಯ ವಿರೋಧ ಮಾಡುವುದಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಸುಲಭವಾಗಿ ಮುಗಿದು ಹೋಗಲಿದೆ ಎಂದು ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿತ್ತು ಎನ್ನಲಾಗಿದೆ.
ಆದರೆ, ವಿಧಿಯಾಟವೇ ಬೇರೆನೆ ಆಯ್ತು. ಸಂಸದ ಸುರೇಶ್ ಅಂಗಡಿ ಹೆಮ್ಮಾರಿ ಕೊರೊನಾಗೆ ಬಲಿಯಾಗಿಬಿಟ್ಟರು. ಅಷ್ಟಕ್ಕೆ ನಾಯಕತ್ವ ಬದಲಾವಣೆ ಕಸರತ್ತು ಮುಗಿಯಿತು ಎಂದೇನಿಲ್ಲ. ಮುಂದೆಯೂ ಕೂಡ ಯಡಿಯೂರಪ್ಪ ಅವರ ಸಿಎಂ ಪಟ್ಟಕ್ಕೆ ಕಂಟಕ ಕಾದಿದೆ. ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಬೆಂಕಿ ಮೇಲೆ ನಡಿಗೆಯಾಗಿದ್ದು, ಯಾವಾಗ ಬೇಕಾದರೂ ಕಂಟಕ ಎದುರಾಗಬಹುದು ಎಂಬುದಕ್ಕೆ ಈ ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ.