ಶಿಷ್ಠಾಚಾರದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ : ಸುರೇಶ್ ಕುಮಾರ್ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ
ಚಾಮರಾಜನಗರ : ಸಚಿವ ಸುರೇಶ್ ಕುಮಾರ್ ಅವರು ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಸುರೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ನನಗೆ ತಿಳಿಸದೆ ಸುರೇಶ್ ಕುಮಾರ್ ಕಾಮಗಾರಿ ವೀಕ್ಷಣೆಗೆ ಹೋಗಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಈಗಾಗ್ಲೇ ನಾಲ್ಕೈದು ಬಾರಿ ಇದೇ ರೀತಿ ಮಾಡಿದ್ದಾರೆ ನಾಲ್ಕೈದು ಬಾರಿಯೂ ಕ್ಷಮೆ ಕೇಳಿದ್ದಾರೆ. ಆದರೆ ಮಾಡೋದನ್ನೇ ಮಾಡ್ತಾ ಇದ್ರೆ ನಾನು ನೋಡ್ತಾ ಕುಳಿತುಕೊಳ್ಳಬೇಕಾ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ವಿರುದ್ಧವೂ ಕೆಂಡಾಮಂಡಲರಾದ ಪುಟ್ಟರಂಗಶೆಟ್ಟಿ, ಇಡೀ ಜಿಲ್ಲೆಯಲ್ಲಿ ತಾನೊಬ್ಬನೇ ಶಾಸಕ ಎಂದು ನಿರಂಜನ್ ಕುಮಾರ್ ತಿಳಿದುಕೊಂಡಿದ್ದಾರೆ. ನಮ್ಮನ್ನೆಲ್ಲ ದನಕಾಯೋರು ಅನ್ಕೊಂಡಿದ್ದಾರೆ. ನಾನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉಡಿಗಾಲ ಕೆರೆ ತುಂಬಿಸುವ ಯೋಜನೆ ಮಾಡಿದ್ದೆ. ಆದರೆ ಯಾರನ್ನೂ ಕರೆಯದೆ ತಮಗೆ ಬೇಕಾದವರನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿದ್ದಾರೆ. ಜವಬ್ದಾರಿಯಿಂದ ತನ್ನ ಕೆಲಸ ತಾನು ಮಾಡಬೇಕು ಮುಂದಿನ ದಿನಗಳಲ್ಲಿ ಸರಿಯಾಗಿ ಹೇಳಬೇಕಾಗುತ್ತದೆ ಎಂದರು.
ಇನ್ನು ನಾನು ಕ್ಷೇತ್ರದ ಶಾಸಕ ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ನಡೆಯಬೇಕು. ಶಿಷ್ಠಾಚಾರದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ, ಪುಟ್ಟರಂಗಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.








