ಮಕ್ಕಳ ಹಿತದೃಷ್ಟಿಯಿಂದ ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ – ಸುರೇಶ್ ಕುಮಾರ್
ಬೆಂಗಳೂರು, ಜುಲೈ 28: ಕೋವಿಡ್ -19 ದಿನದಿದಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ತರಾತುರಿಯಲ್ಲಿ ತೆರೆಯಲು ಸರ್ಕಾರ ತಯಾರಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು ಈ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ. ಆದರೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲಾ ರೀತಿಯಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ವೆಬಿನಾರ್ ನಲ್ಲಿ 36ಕ್ಕೂ ಹೆಚ್ಚು ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಮಕ್ಕಳ ಕಲಿಕೆಯ ನಿರಂತರತೆಗೆ ಕೈಗೊಳ್ಳಬಹುದಾದ ವಿವಿಧ ಉಪಕ್ರಮಗಳನ್ನು ವಿವರಿಸಿದರು. ಇದನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.
ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿರುವ ಶಿಕ್ಷಣ ಇಲಾಖೆ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಉಪಕ್ರಮಗಳಿಂದ ಯೋಚಿಸುತ್ತಿದೆ ಎಂದರು.

ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್ , ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‍ಫೀಲ್ಡ್ ರೆಡಿ ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್, ಬಿಜಿವಿಎಸ್, ಎಸ್‍ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್, ಐ.ಎಲ್.ಪಿ. ಸೇರಿದಂತೆ ಸುಮಾರು 36 ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.








