ಮೌನ ಮುರಿದ ಸುರೇಸ್ ರೈನಾ.. ಮತ್ತೆ ಸಿಎಸ್‍ಕೆ ಕ್ಯಾಂಪ್ ಸೇರುವ ಬಗ್ಗೆ ಸುಳಿವು ನೀಡಿದ ಸೋನು…!
ವೈಯಕ್ತಿನ ಕಾರಣ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರನಡೆದಿದ್ದ ಸುರೇಶ್ ರೈನಾ ಈಗ ದೆಹಲಿಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ರೈನಾ ಸಿಎಸ್‍ಕೆ ತಂಡದಿಂದ ಹೊರನಡೆಯುತ್ತಿದ್ದಂತೆ ಸಿಎಸ್‍ಕೆ ಬಾಸ್ ಎನ್. ಶ್ರೀನಿವಾಸನ್ ಕಿಡಿ ಕಾರಿದ್ದರು. ಇನ್ನೊಂದೆಡೆ ರೈನಾ ಹೊಟೇಲ್ ರೂಮ್ ವಿಚಾರದಲ್ಲಿ ಸಿಟ್ಟು ಮಾಡಿಕೊಂಡು ತಂಡದಿಂದ ಹೊರನಡೆದಿದ್ದರು. ನಾಯಕ ಧೋನಿಯ ಜೊತೆಗು ವಿರಸ ಉಂಟಾಗಿತ್ತು. ಹೀಗಾಗಿ ಸುರೇಶ್ ರೈನಾ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ ಅಂತ ಹೇಳಲಾಗಿತ್ತು.
ಆದ್ರೆ ಸುರೇಶ್ ರೈನಾ ಸಿಎಸ್‍ಕೆ ತಂಡದಿಂದ ಹೊರಬರಲು ಪ್ರಮುಖ ಕಾರಣವೇ ಬೇರೆಯಾಗಿದೆ. ರೈನಾ ಅವರ ಸೋದರತ್ತೆಯ ಕುಟುಂಬದ ಮೇಲೆ ಅನಾಮಿಕರು ದಾಳಿ ನಡೆಸಿದ್ದರು. ಹೀಗಾಗಿ ರೈನಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದ್ರಿಂದಾಗಿ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಆದ್ರೆ ಸದ್ಯ ರೈನಾಗೆ ತನ್ನ ಕುಟುಂಬದ ಸದಸ್ಯರನ್ನು ಇನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಕ್ವಾರಂಟೈನ್ ಮುಗಿದ ನಂತರವಷ್ಟೇ ರೈನಾ ತನ್ನ ಕುಟುಂಬದ ಸದಸ್ಯರನ್ನು ನೋಡಬೇಕಾಗಿದೆ.
ಈ ನಡುವೆ, ಸುರೇಶ್ ರೈನಾ ಮತ್ತೆ ಸಿಎಸ್‍ಕೆ ತಂಡವನ್ನು ಸೇರಿಕೊಳ್ಳುವುದರ ಬಗ್ಗೆ ಸಣ್ಣ ಸುಳಿವನ್ನು ನೀಡಿದ್ದಾರೆ. ಸಿಎಸ್‍ಕೆ ಮತ್ತು ನನ್ನ ನಡುವೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನನಗೆ ಸಿಎಸ್‍ಕೆ ನೀಡುತ್ತಿರುವ ಸಂಭಾವಣೆಯನ್ನು ಬಲವಾದ ಕಾರಣವಿಲ್ಲದೆ ಬಿಟ್ಟು ಹೊಗಲು ಸಾಧ್ಯವಿಲ್ಲ. ಇದೀಗ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದೇನೆ. ಆದ್ರೆ ನನಗೆ ಇನ್ನೂ ವಯಸ್ಸಿದೆ. ಐಪಿಎಲ್ ನಲ್ಲಿ ಇನ್ನೂ ನಾಲ್ಕೈದು ವರ್ಷ ಆಡುವ ಸಾಮಥ್ರ್ಯವನ್ನು ಹೊಂದಿದ್ದೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಇದೀಗ ಕ್ವಾರಂಟೈನ್ ನಲ್ಲಿದ್ರೂ ನಾನು ಅಭ್ಯಾಸ ನಡೆಸುತ್ತಿದ್ದೇನೆ. ನೀವು ನನ್ನನ್ನು ಸಿಎಸ್‍ಕೆ ಕ್ಯಾಂಪ್‍ನಲ್ಲಿ ಮತ್ತೊಮ್ಮೆ ನೋಡಬಹುದು ಎಂದು ರೈನಾ ಸಣ್ಣ ಸುಳಿವು ನೀಡಿದ್ದಾರೆ.
ಏತನ್ಮಧ್ಯೆ ಸಿಎಸ್‍ಕೆ ತಂಡದ ಸಿಇಒ ಕಾಸಿ ವಿಶ್ವನಾಥನ್ ಕೂಡ ರೈನಾ ಬಗ್ಗೆ ಮಾತನಾಡಿದ್ದಾರೆ. ಸುರೇಶ್ ರೈನಾ ಈ ಋತುವಿಗೆ ಅಲಭ್ಯರಾಗಿರುತ್ತಾರೆ. ನಾವು ಯಾವಾಗಲೂ ಆಟಗಾರರಿಗೆ ಬೆಂಬಲ ನೀಡುತ್ತೇವೆ. ರೈನಾ ವೈಯಕ್ತಿಕ ಕಾರಣವನ್ನು ನೀಡಿದ್ದಾರೆ. ಅವರು ಯಾವಾಗ ಬೇಕಾದ್ರೂ ತಂಡವನ್ನು ಸೇರಿಕೊಳ್ಳಬಹುದು. ನಾವು ಆಟಗಾರರ ವಿರುದ್ಧವಾಗಿಲ್ಲ. ಮುಂದಿನ ಋತುವಿಗೂ ಏನು ತೊಂದರೆಯಾಗಲ್ಲ ಎಂದು ಹೇಳಿದ್ದಾರೆ.
ಇನ್ನು ಸುರೇಶ್ ರೈನಾ ಎನ್, ಶ್ರೀನಿವಾಸನ್ ಮತ್ತು ನಾಯಕ ಧೋನಿಯ ಬಗ್ಗೆ ಮಾತನಾಡಿದ್ದಾರೆ. ಎನ್. ಶ್ರೀನಿವಾಸನ್ ಅವರು ನನಗೆ ತಂದೆಯ ಸಮಾನ. ಅವರು ನನಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದಾರೆ. ಅವರಿಗೆ ನಾನು ತಂಡದಿಂದ ಹೊರಬರುವಾಗ ನಿಜವಾದ ಕಾರಣ ಗೊತ್ತಿರಲಿಲ್ಲ. ಹಾಗಾಗಿ ತಂದೆ ಮಗನಿಗೆ ಬೈಯುವ ಹಾಗೇ ಹೇಳಿದ್ದಾರೆ ಎಂದು ರೈನಾ ಹೇಳಿದ್ದಾರೆ.
ಇನ್ನು ಧೋನಿ ಬಗ್ಗೆ ಮಾತನಾಡಿದ್ದು ಹೀಗೆ.. ಸಿಎಸ್‍ಕೆ ನನ್ನ ಕುಟುಂಬ. ನನಗೆ ಎಮ್.ಎಸ್. ಭಾಯ್ ಮುಖ್ಯ. ಇದೊಂದು ಕಠಿಣ ನಿರ್ಧಾರವಾಗಿತ್ತು ಎಂದು ಸುರೇಶ್ ರೈನಾ ಸಿಎಸ್‍ಕೆ ತಂಡದಿಂದ ಹೊರಬಂದಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.








