ರಾಜ್ಯದಲ್ಲಿ ಸಚಿವ ಸಂಪುಟಕ್ಕೆ ಸರ್ಜರಿ ಪಕ್ಕಾ..?
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ದೆಹಲಿಗೆ ಪಯಣ ಬೆಳೆಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಅದರಲ್ಲೂ ಬಿಜೆಪಿ ಪಾಳಯದಲ್ಲಿ ಸಿಎಂ ದೆಹಲಿ ಭೇಟಿ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಇಂದು ದೆಹಲಿಗೆ ಭೇಟಿ ನೀಡಿದ್ದು ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಯುವ ಮುನ್ಸೂಚನೆಯಾ ಎಂಬ ಕುತೂಹಲ ಕೆರಳಿಸಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದು, ಈಗಾಗಲೇ ಸಚಿವ ಎಸ್.ಟಿ.ಸೋಮಶೇಖರ್ ಪ್ರಧಾನಿ ಮೋದಿ ಭೇಟಿಗೆ ಕಾಲಾವಕಾಶವನ್ನು ಕೋರಿದ್ದಾರೆ. ಸಮಯ ಕೊಟ್ಟ ಕೂಡಲೇ ನಾವು ಏಳೆಂಟು ಸಚಿವರು ಒಟ್ಟಿಗೆ ದೆಹಲಿಗೆ ಭೇಟಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ, ಮುನಿರತ್ನ ಪರ ಬ್ಯಾಟ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಪೈಕಿ ಸಂಪುಟ ಪುನರ್ ರಚನೆ ಪ್ರಮುಖವಾದದ್ದು ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಸಂಪುಟ ವಿಸ್ತರಣೆ ಆದಾಗ ಕೆಲ ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ಶಾಸಕರಾಗಿ ಗೆದ್ದ ಮುನಿರತ್ನ ಕೂಡ ತಮ್ಮ ಮುನಿಸು ತೋರಿಸಿದ್ದರು.
ಆಗ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವುದಾಗಿ ಮುನಿರತ್ನಗೆ ಮಾತು ಕೊಟ್ಟಿದ್ದರು. ಆದ್ರೆ ಇದಕ್ಕೆ ಕೊರೊನಾ ಅಡ್ಡಿಯಾಗಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ತಗ್ಗಿದೆ. ಹೈಕಮಾಂಡ್ ಕೂಡ ಕೊಂಚ ಫ್ರೀ ಮಾಡಿಕೊಂಡಿದ್ದು, ಕರ್ನಾಟಕದ ಬಗ್ಗೆ ಯೋಚಿಸಲು ಶುರು ಮಾಡಿದೆ. ಮುಖ್ಯವಾಗಿ ಸಿಎಂ ಬದಲಾವಣೆ ವಿಷಯ ಕೇಳಿಬಂದ ಬೆನ್ನಲ್ಲೆ ಸಂಪುಟಕ್ಕೆ ಸರ್ಜರಿ ನಡೆಯಲಿದೆ ಎಂಬ ಮಾತುಗಳ ಕೂಡ ಕೇಳಿಬಂದಿದ್ದವು. ಇದಕ್ಕೆ ಇದೀಗ ಕಾಲ ಕೂಡಿ ಬಂದಂತಿದ್ದು, ಸಂಪುಟ ಸರ್ಜರಿ ಪಕ್ಕಾ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಿಎಂ ದೆಹಲಿ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಬಿ.ಸಿ.ಪಾಟೀಲ್, ಸೋಮಶೇಖರ್ ಸೇರಿದಂತೆ ಹಲವು ದೆಹಲಿಗೆ ಭೇಟಿ ನೀಡಿ, ಮುನಿರತ್ನ, ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.








